ಡೆನ್ಮಾರ್ಕ್
ವಾಯುವ್ಯ ಯೂರೋಪಿನ ಒಂದು ರಾಜಪ್ರಭುತ್ವ. ಸ್ಕಾಂಡಿನೇವಿಯನ್ ರಾಜ್ಯಗಳಲ್ಲಿ ಅತ್ಯಂತ ಚಿಕ್ಕದು. ತಗ್ಗಾದ ಜಟ್ಲಂಡ್ ಪರ್ಯಾಯದ್ವೀಪದಿಂದಲೂ ಎರಡು ದ್ವೀಪಸ್ತೋಮಗಳಿಂದಲೂ ಕೂಡಿದೆ. ಪೂರ್ವದಲ್ಲಿ ಸ್ಕ್ಯಾಗರ್ಯಾಕ್ ಮತ್ತು ಬಾಲ್ಟಿಕ್ ಸಮುದ್ರಗಳ ನಡುವೆ ಇರುವ ದ್ವೀಪಸ್ತೋಮದಲ್ಲಿ 482 ದ್ವೀಪಗಳಿವೆ. ಇವುಗಳ ಪೈಕಿ ಅತ್ಯಂತ ಪೂರ್ವದಲ್ಲಿ ಒಂಟಿಯಾಗಿರುವ ದ್ವೀಪ ಬಾರ್ನ್‍ಹೋಮ್. ಇದು ಉಳಿದವುಗಳಿಂದ 140 ಕಿ.ಮೀ. ದೂರದಲ್ಲಿದೆ. ಅಟ್ಲಾಂಟಿಕ್‍ನಲ್ಲಿ ಇನ್ನೊಂದು ದ್ವೀಪಸ್ತೋಮವಾದ ಫ್ಯಾರೋ (1,399 ಚ.ಕಿ.ಮೀ.) ಇರುವುದು. ಐಸ್ಲೆಂಡ್ ಮಾರ್ಗದಲ್ಲಿ. 1953ರ ವರೆಗೆ ಡೆನ್ಮಾರ್ಕಿನ ವಸಾಹತಾಗಿದ್ದ ಗ್ರೀನ್ಲೆಂಡ್ (ನೋಡಿ- ಗ್ರೀನ್ಲೆಂಡ್) ಈಗ ಅಧಿಕೃತವಾಗಿ ಡೆನ್ಮಾರ್ಕಿನ ಭಾಗ. ಡೆನ್ಮಾರ್ಕಿನ ಮುಖ್ಯ ಭೂಭಾಗ ಮೂರು ಕಡೆಗಳಲ್ಲಿ ಸಮುದ್ರದಿಂದ ಆವೃತವಾಗಿದೆ. ದಕ್ಷಿಣದಲ್ಲಿ ಪಶ್ಚಿಮ ಜರ್ಮನಿಯೊಂದಿಗೆ 67.62 ಕಿ.ಮೀ. ಭೂಗಡಿ ಇದೆ. ಡೆನ್ಮಾರ್ಕಿನ್ನು ಉತ್ತರದಲ್ಲಿ ನಾರ್ವೆಯಿಂದ ಸ್ಕ್ಯಾಗರ್ಯಾಕ್ ಸಮುದ್ರವೂ ಪೂರ್ವದಲ್ಲಿ ಸ್ವೀಡನಿನಿಂದ ಅರಸನ್ ಜಲಸಂಧಿ ಮತ್ತು ಕ್ಯಾಟಿಗಾಟ್ ಸಮುದ್ರಗಳೂ ಬೇರ್ಪಡಿಸುತ್ತವೆ. ಫ್ಯಾರೋ ದ್ವೀಪಗಳಂತೂ ದೂರದಲ್ಲೇ ಇವೆ. ಜಟ್ಲಂಡ್ ಪರ್ಯಾಯ ದ್ವೀಪದ ಬಹುಭಾಗ ಡೆನ್ಮಾರ್ಕಿನಲ್ಲಿದೆ. ಈ ಭಾಗದ ವಿಸ್ತೀರ್ಣ 29,619 ಚ. ಕಿ.ಮೀ. ಗ್ರೀನ್ಲೆಂಡನ್ನುಳಿದ ಪ್ರದೇಶದ ಅತ್ಯಂತ ದೊಡ್ಡ ದ್ವೀಪ ಷಲಾನ್. ಇದರ ವಿಸ್ತೀರ್ಣ 7,016 ಚ.ಕಿ.ಮೀ. ಅರಸನ್ ಜಲಸಂಧಿ ಇದನ್ನು ಸ್ವೀಡನಿನಿಂದ ಪ್ರತ್ಯೇಕಿಸುತ್ತದೆ. ಎರಡನೆಯ ದೊಡ್ಡ ದ್ವೀಪ ಫಿನ್ (1,346 ಚ.ಮೈ.). ಇತರ ದ್ವೀಪಗಳಲ್ಲಿ ಮುಖ್ಯವಾದವು ಫಾಲ್‍ಸ್ಟರ್ (198 ಚ.ಮೈ.), ಲಾಲೆಂಡ್ (477 ಚ.ಮೈ.) ಲಾಂಗಲಾನ್ (110 ಚ.ಮೈ.) ಮತ್ತು ಬಾರ್ನ್‍ಹೋಮ್ (227 ಚ.ಮೈ.). ಗ್ರೀನ್ಲೆಂಡನ್ನೂ ಫ್ಯಾರೋ ದ್ವೀಪಗಳನ್ನೂ ಬಿಟ್ಟು ಉಳಿದ ಪ್ರದೇಶ ಪೂ. ರೇ. 804'-15012' ಮತ್ತು ಉ.ಅ. 54033'-57045' ನಡುವೆ ಇದೆ. ವಿಸ್ತೀರ್ಣ 42,930 ಚ.ಕಿ.ಮೀ. ಜನಸಂಖ್ಯೆ 54,15,978 (2005). ರಾಜಧಾನಿ ಕೋಪೆನ್‍ಹೇಗೆನ್.
(ಡಿ.ಎಸ್.ಜೆ.)

ಭೂ ವೃತ್ತಾಂಶ : ಡೆನ್ಮಾರ್ಕಿನ ಮೇಲ್ಮೈ ಲಕ್ಷಣ ಪ್ಲೀಸ್ಟೋಸೀನ್ ಕಲ್ಪದಲ್ಲಿ ತಲೆದೋರಿದ ಹಿಮಯುಗದಿಂದ ರೂಪುತಳೆಯಿತು. ಈ ಮಹಾಹಿಮಯುಗ ಇಡೀ ಉತ್ತರ ಯೂರೋಪು ಖಂಡವನ್ನು ಸುಮಾರು ಹತ್ತುಲಕ್ಷ ವರ್ಷಗಳ ಪರ್ಯಂತ ತನ್ನ ಪ್ರಭಾವಕ್ಕೆ ಒಳಗುಮಾಡಿ ಅಚ್ಚಳಿಯದ ಮುದ್ರೆಯನ್ನು ಒತ್ತಿದೆ. ಹಿಮನದಿಗಳು ಒಯ್ದ ಮೆಕ್ಕಲು ಭೂಭಾಗದ ಇತರ ಶಿಲೆಗಳನ್ನೆಲ್ಲ ಆವರಿಸಿ ಅವು ಕಾಣದಂತೆ ಮಾಡಿ ನಯನ ಮನೋಹರವಾದ ದಿಬ್ಬಗಳು, ಸುಂದರ ಕಣಿವೆಗಳು ಮತ್ತು ಹಚ್ಚ ಹಸಿರಿನಿಂದ ಕೂಡಿದ ವಿಶಾಲ ಮೈದಾನ ಪ್ರದೇಶಗಳನ್ನು ರೂಪಿಸಿವೆ. ಆದರೆ ಸಮುದ್ರತೀರಗಳ ಮತ್ತು ಗಣಿತೋಡುಗಳ ಆಳದಲ್ಲಿ ಹುದುಗಿರುವ ಹಳೆಯ ಶಿಲಾವರ್ಗಗಳು ಸ್ಪಷ್ಟವಾಗಿ ಹೊರಕಂಡಿವೆ. ಈಚಿನ ವರ್ಷಗಳಲ್ಲಿ ತೈಲಾನ್ವೇಷಣೆಗಾಗಿ ಹಲವಾರು ಕಡೆ ನೆಲವನ್ನು ಕೊರೆದಿರುವ ಕಾರ್ಯವೂ ಈ ದಿಶೆಯಲ್ಲಿ ಬಹು ಸಹಾಯಕ.

	ಡೆನ್ಮಾರ್ಕಿನಲ್ಲೂ ಭೂಯುಗದ ಅತ್ಯಂತ ಹಳೆಯ ಕಾಲವೆನಿಸಿದ ಪ್ರಿಕೇಂಬ್ರಿಯನ್ ಕಲ್ಪದ ನೈಸ್ (ಗೀರುಶಿಲೆ) ಮತ್ತು ಇತರ ರೂಪಾಂತರ ಶಿಲೆಗಳು ಹಾಗೂ ಗ್ರ್ಯಾನೈಟುಗಳಿವೆ. ಬಾರ್ನ್‍ಹಾಮ್ ಭಾಗದಲ್ಲಿ ಈ ಶಿಲಾಸಮೂಹವನ್ನು ವಿಸ್ತಾರವಾದ ಪ್ರದೇಶದಲ್ಲಿ ಕಾಣಬಹುದು. ಇವುಗಳ ಸವೆತದಿಂದಾದ ಶಿಲಾಛಿದ್ರಗಳು ನಿಕ್ಷೇಪಗೊಂಡು ನೆಕ್ಸೊಮರಳು ಶಿಲಾಸ್ತರಗಳು ಉಂಟಾಗಿವೆ. ಇವುಗಳ ಮೇಲೆ ಬೂದು ಹಾಗೂ ಬಿಳಿಯ ಕ್ವಾಟ್ರ್ಸೈಟುಗಳು ಹರಡಿವೆ. ಈ ಶಿಲೆಗಳು ಕೆಳ ಕೇಂಬ್ರಿಯನ್ ಕಲ್ಪದಲ್ಲಿ ಯೂರೋಪಿನ ಬಹುಭಾಗದಲ್ಲಿ ತಲೆದೋರಿದ ಸಮುದ್ರಾಕ್ರಮಣದ ಸೂಚಿಗಳು. ಇವುಗಳ ಒತ್ತಟ್ಟಿಗೆ ಆಳವಾದ ಸಾಗರ ಪ್ರದೇಶಗಳಲ್ಲಿ ನಿಕ್ಷೇಪಗೊಂಡ ಮಧ್ಯ ಮತ್ತು ಮೇಲಿನ ಕೇಂಬ್ರಿಯನ್, ಆರ್ಡೊವೀಸಿಯನ್ ಮತ್ತು ಸೈಲೂರಿಯನ್ ಕಾಲಗಳ ಹಸಿರು ಬಣ್ಣದ ಜೇಡು ಶಿಲಾಸ್ತರಗಳು, ಫಾಸಿಲುಗಳಿಂದ ಕೂಡಿದ ಕಪ್ಪು ಹಾಗೂ ಬೂದು ಜೇಡುಶಿಲೆ ಮತ್ತು ಸುಣ್ಣ ಶಿಲಾಸ್ತರಗಳನ್ನೂ ಕಾಣಬಹುದು. ಫಾಸಿಲುಗಳಲ್ಲಿ ಆರ್ಥೋಸಿರಟೈಟ್ ಮತ್ತು ಗ್ರ್ಯಾಪ್ಟೊಲೈಟುಗಳು ಬಹು ಪ್ರಮುಖವಾದವು. ಟ್ರಯಾಸಿಕ್ ಕಾಲದ ಕೆಂಪು ಹಾಗೂ ಹಸುರು ಜೇಡುಶಿಲೆ ಮತ್ತು ಮರಳು ಶಿಲಾಸ್ತರಗಳೂ ಜುರಾಸಿಕ್ ಕಾಲದ ಸಾಗರ, ನದಿ ಮತ್ತು ನದಿಮುಖಜ ಪ್ರದೇಶಗಳಲ್ಲಿ ನಿಕ್ಷೇಪಗೊಂಡ ಕಲ್ಲಿದ್ದಲು ಸಿರಗಳೂ ಕಾವುಜೇಡು ನಿಕ್ಷೇಪಗಳೂ ಅಲ್ಲಲ್ಲಿ ಕಂಡುಬರುತ್ತವೆ.

	ಟರ್ಷಿಯರಿ ಕಾಲದಲ್ಲಿ ಡೆನ್ಮಾರ್ಕಿನ ಬಹುತೇಕ ಭಾಗದಲ್ಲಿ ಹಲವಾರು ಸ್ತರಭಂಗಗಳು ಉಂಟಾಗಿ ಕೆಲವು ಪ್ರದೇಶಗಳು ಮೇಲಕ್ಕೆ ಒಯ್ಯಲ್ಪಟ್ಟು ಮತ್ತೆ ಕೆಲವು ಆಳಕ್ಕೆ ದೂಡಲ್ಪಟ್ಟ ನಿದರ್ಶನಗಳೂ ಉಂಟು. ಹೀಗೆ ಮೇಲಕ್ಕೆ ಎತ್ತಲಾದ ಭೂಭಾಗಗಳಲ್ಲಿ ಬಾರ್ನ್‍ಹಾಮ್ ಒಂದು ಅತ್ಯುತ್ತಮ ಉದಾಹರಣೆಯಾದರೆ ಡೆನ್ಮಾರ್ಕಿನ ಇತರ ಪ್ರದೇಶಗಳು ಆಳಕ್ಕೆ ದೂಡಲ್ಪಟ್ಟ ಸಮುದ್ರವಾಗಿ ಅಲ್ಲಿ ಶಿಲಾಛಿದ್ರಗಳ ನಿಕ್ಷೇಪ ಎಂದಿನಂತೆ ಆರಂಭವಾಯಿತು. ಕ್ರಮೇಣ ಜಲಜಶಿಲಾಶ್ರೇಣಿಗಳು ಮೈದಳೆದುವು. ಈ ತೆರನಾದ ಕೇಂದ್ರ ಜಟ್ಲೆಂಟ್ ಮುಂತಾದ ಪ್ರದೇಶಗಳಲ್ಲಿ ನಡೆಸಿದ ಭೂಸಮೀಕ್ಷೆಗಳಿಂದ ಜಲಜಶಿಲಾಶ್ರೇಣಿಗಳು ಸುಮಾರು 5-6 ಕಿಲೊಮೀಟರುಗಳಷ್ಟು ಮಂದವಾಗಿರಬಹುದೆಂದು ಊಹಿಸಲಾಗಿದೆ. ದಕ್ಷಿಣ ಡೆನ್ಮಾರ್ಕಿನಲ್ಲಿ ಉಷ್ಣಹವೆಯ ಮರುಭೂಮಿಯ ಸನ್ನಿವೇಶದಲ್ಲಿ ನಿಕ್ಷೇಪಗೊಂಡ ಕೆಳ ಪರ್ಮಿಯನ್ ಕಲ್ಪದ ಕೆಂಪು ಮರಳುಶಿಲೆ ಹಾಗೂ ಜೇಡು ಶಿಲಾಸ್ತರಗಳಿವೆ. ಬಿಸಿಲ ಬೇಗೆಯಿಂದ ಸಮುದ್ರದ ನೀರು ಕ್ರಮೇಣ ಆರಿ ಹೆಪ್ಪುಗಟ್ಟಿ ಲವಣ ನಿಕ್ಷೇಪಗಳುಂಟಾದುವು. ಮುಂದೆ ಭೂಚಿಪ್ಪಿನಲ್ಲಿ ಉಂಟಾದ ಹಲವಾರು ವ್ಯತ್ಯಾಸಗಳಿಂದ ಲವಣ ಗುಮ್ಮಟಗಳೂ ತಲೆದೋರಿದುವು. ಇಂಥವನ್ನು ಜಟ್ಲೆಂಡ್ ಪ್ರದೇಶದ ಹಲವಾರು ಕಡೆ ಗುರುತಿಸಲಾಗಿದೆ. ವಿವಿಧ ಗಾತ್ರದ ಗುಮ್ಮಟಗಳಿದ್ದು ಅವುಗಳ ವ್ಯಾಸ 1 ರಿಂದ 8 ಕಿ.ಮೀ. ನಷ್ಟಿರುವುದು ಕಂಡುಬಂದಿದೆ. ಅನೇಕ ಗುಮ್ಮಟಗಳಲ್ಲಿ ಗಣಿಯ ಕೆಲಸವೂ ನಡೆಯುತ್ತಿದೆ.

	ಜುರಾಸಿಕ್ ಕಾಲದ ವೇಳೆಗಾಗಲೆ ಈ ಶುಷ್ಕ ಹವೆ ಬದಲಾಗಿ ವಾಯುವಿನಲ್ಲಿ ತೇವಾಂಶ ಅಧಿಕಗೊಂಡಿತು. ಗಾಢ ಛಾಯೆಯ ಜೇಡುಶಿಲೆ ಮತ್ತು ಮರಳು ಶಿಲಾಸ್ತರಗಳು ಸಮುದ್ರಭಾಗಗಳಲ್ಲಿ ನಿಕ್ಷೇಪಗೊಂಡವು. ಕ್ರಿಟೇಷನ್ ಕಲ್ಪದ ಜಾಕ್, ಬ್ರಯೊeóÉೂೀವನ್ ಸುಣ್ಣಶಿಲೆ ಕಾರ್ಲ್‍ಸುಣ್ಣಶಿಲೆ, ಸುಣ್ಣಮಿಶ್ರಿತ ಮರಳು ಹಾಗೂ ಜೇಡುಶಿಲಾಸ್ತರಗಳು ಈ ಬಗೆಯವು. ದೇಶದ ಸಮುದ್ರ ತೀರಗಳಲ್ಲಿ ಈ ನಿಕ್ಷೇಪಗಳನ್ನು ಸುಲಭವಾಗಿ ಗುರುತಿಸಬಹುದು. 

	ಟರ್ಷಿಯರಿ ಕಲ್ಪದಲ್ಲಿ ಭೂಭಾಗಗಳಿಂದ ದೊರೆತ ಶಿಲಾಛಿದ್ರಗಳ ನಿಕ್ಷೇಪ ಮತ್ತೆ ಪ್ರಾರಂಭವಾಯಿತೆನ್ನಬಹುದು. ಹಲಕೆಲವು ಜ್ವಾಲಾಮುಖಿಗಳೂ ಕಾಣಿಸಿಕೊಂಡು ಅವುಗಳಿಂದ ಹೊರಬಿದ್ದ ಬೂದಿ ಮತ್ತು ಇತರ ವಸ್ತುಗಳ ನಿಕ್ಷೇಪದಿಂದ ಟೂಫಾ ಎಂಬ ತೆಳು ಶಿಲಾಸ್ತರಗಳು ಉಂಟಾದುವು. ಇವುಗಳ ಜೊತೆಯಲ್ಲಿ ಮಾರ್ಲ್, ಜೇಡು ಹಾಗೂ ಹಸಿರು ಮರಳುಶಿಲೆಯ ಸ್ತರಗಳನ್ನೂ ಗುರುತಿಸಬಹುದು. ಇವುಗಳ ಒಡನಿರುವ ಸಸ್ಯಾಂಗಾರದ ನಿಕ್ಷೇಪಗಳೂ ಬಹುಮುಖ್ಯ. ಇವು ಸರೋವರಗಳಲ್ಲಿ ಉಂಟಾದುವು.

	ಚತುರ್ಥ (ಕ್ವಾಟರ್ನರಿ) ಕಲ್ಪದಲ್ಲಿ ಇಡೀ ಡೆನ್ಮಾರ್ಕ್ ಮೂರು ಬಾರಿ ಹಿವi ಹಾಳೆಗಳಿಂದ ಆವೃತವಾಹಿತು. ಇವೇ ಹಿಮಯುಗಗಳು. ಇವುಗಳ ವಿರಾಮ ಕಾಲದಲ್ಲಿ ವಿಶಿಷ್ಟ ಶಿಲಾಸ್ತರಗಳು ನಿಕ್ಷೇಪಗೊಂಡ ದಾಖಲೆಗಳಿವೆ. ಇಂದು ಕಂಡುಬರುವ ಡೆನ್ಮಾರ್ಕಿನ ಭೂವಿನ್ಯಾಸ ಈ ಹಿಮನದಿಗಳಿಂದ ರೂಪುಗೊಂಡದ್ದು. ಹಿಮದ ಹಾಳೆಗಳು ಕರಗಿ ಹಿಂಜರಿದಾಗ ನೆಲಮಟ್ಟದಲ್ಲಿ ಉಂಟಾದ ವ್ಯತ್ಯಾಸಗಳನ್ನು ಉತ್ತರ ಡೆನ್ಮಾರ್ಕಿನ ಹಲವಾರು ಕಡೆ ಸ್ಪಷ್ಟವಾಗಿ ಗುರುತಿಸಬಹುದು. 

	ಡೆನ್ಮಾರ್ಕ್ ರಾಜ್ಯದ ಫ್ಯಾರೋ ದ್ವೀಪಗಳಲ್ಲಿ ಬೆಸಾಲ್ಟ್ ಲಾವಾಸ್ತರಗಳ ಬೃಹತ್ ಶ್ರೇಣಿಗಳಿವೆ. ಇವುಗಳ ಒಟ್ಟು ಮಂದ ಸುಮಾರು 2,900 ಮೀಟರುಗಳು. ಕೆಲವು ಲಾವಾಸ್ತರಗಳು 30 ಮೀಟರಿನಷ್ಟು ಮಂದವಾಗಿದ್ದು ಶ್ರೇಣಿಯ ಸ್ತರಗಳ ನಡುವೆ ತೆಳುವಾದ ಟೂಫಾ ಸ್ತರಗಳಿವೆ. ಶ್ರೇಣಿಯ ಕೆಲವೆಡೆ ಸುಮಾರು 900 ಮೀಟರುಗಳಷ್ಟು ಎತ್ತರದಲ್ಲಿ ಮರಳುಶಿಲೆ, ಕಾವುಜೇಡು, ಜೇಡು ಮತ್ತು ಕಲ್ಲಿದ್ದಲ ಸ್ತರಗಳನ್ನು ಕಾಣಬಹುದು. ಸುಡೆರೊ ಎಂಬಲ್ಲಿ ಕಲ್ಲಿದ್ದಲು ಗಣಿಯೊಂದಿದೆ.

	ಇದೇ ರಾಜ್ಯದ ಗ್ರೀನ್‍ಲೆಂಡ್ ಪ್ರಪಂಚದಲ್ಲೇ ಅತ್ಯಂತ ದೊಡ್ಡ ದ್ವೀಪ. ಇದರ ಬಹುಭಾಗ ಇಂದಿಗೂ ಮಂದವಾದ ಹಿಮದ ಹಾಳೆಗಳಿಂದ ಮುಚ್ಚಿಹೋಗಿದೆ. ಬಹುಶಃ ಈ ದ್ವೀಪ ಭಾಗದಲ್ಲೆಲ್ಲ ಪ್ರಿಕೇಂಬ್ರಿಯನ್ ಕಲ್ಪದ ಶಿಲೆಗಳೇ ಪ್ರಧಾನವಾಗಿವೆ ಎಂದು ಊಹಿಸಬಹುದು. ಪಶ್ಚಿಮ ಹಾಗೂ ಪೂರ್ವಕರಾವಳಿಗಳಲ್ಲಿ ಪ್ರಿಕೇಂಬ್ರಿಯನ್ ಯುಗದ ನೈಸ್ ಮತ್ತು ಇತರ ರೂಪಾಂತರ ಶಿಲೆಗಳನ್ನು ಕಾಣಬಹುದು. ಇವುಗಳಲ್ಲಿ ಪರ್ವತಜನ್ಯವಿನ್ಯಾಸಗಳನ್ನು ಗುರುತಿಸಲಾಗಿದೆ. ಇವಿಗ್‍ಟಟ್ ಬಳಿಯ ಪೆಗ್ಮಟೈಟ್ ಮತ್ತು ಜೂಲಿಯಾನಾ ಹ್ಯಾಬ್ ಜಿಲ್ಲೆಯ ನೆಫೆಲೀನ್ ಸಯನೈಟುಗಳು ಬಹು ಮುಖ್ಯವಾದವು. ಪೆಗ್ಮಟಿಟಿನಲ್ಲಿ ಕ್ರಯೊಲೈಟ್ ಎಂಬ ಖನಿಜದ ಗಣಿ ಇದೆ. ನರ್‍ಸುಕ್ ಬಳಿಯ ನೆಫಲೀನ್ ಸಯನೈಟುಗಳಲ್ಲಿ ಯುರೇನಿಯಮ್, ಥೋರಿಯಮ್, ಬೆರಿಲಿಯಮ್ ಮತ್ತು ನಯೊಬಿಯಮ್ ಮುಂತಾದ ಅಪರೂಪ ಧಾತುಗಳನ್ನು ಒಳಗೊಂಡ ಅಮೂಲ್ಯ ಖನಿಜ ನಿಕ್ಷೇಪಗಳಿವೆ.

	ಉತ್ತರ ಮತ್ತು ಪೂರ್ವ ಕರಾವಳಿಗಳಲ್ಲಿ ಭೂಇತಿಹಾಸದ ವಿವಿಧಕಾಲಗಳ ಉತ್ತಮ ಜಲಜಶಿಲಾಶ್ರೇಣಿಗಳಿವೆ. ಡಿವೋನಿಯನ್ ಸ್ತರಗಳಲ್ಲಿ ಮೊದಲ ಮೀನಿನ ಮತ್ತು ಸ್ಟೀಗೋಸೆಫಾಲಿಯ ಎಂಬ ಅತ್ಯಂತ ಪ್ರಾಚೀನ ಸರೀಸೃಪದ ಅವಶೇಷಗಳಿವೆ. ಮೆಸ್ಟರ್‍ವಿಗ್ ಪ್ರದೇಶದ ಜಲಜ ಶಿಲಾಶ್ರೇಣಿಗಳಲ್ಲಿರುವ ಕ್ವಾಟ್ರ್ಸ್ ಸಿರಗಳಲ್ಲಿ ಗೆಲಿನ ಮತ್ತು ಜಿûಂಕ್‍ಬ್ಲೆಂಡ್ ಖನಿಜ ನಿಕ್ಷೇಪಗಳಿವೆ. ಪೂರ್ವಕರಾವಳಿಯ ಜಲಜಶಿಲಾಸ್ತರಗಳು ಕೆಲಿಡೋನಿಯನ್ ಮತ್ತು ಹರ್ಸಿನಿಯನ್ ಪರ್ವತಜನ್ಯಶಕ್ತಿಗಳ ಪ್ರಭಾವಕ್ಕೊಳಗಾಗಿ ಅನೇಕ ಕಡೆ ಮಡಿಕೆಬಿದ್ದಿದೆ.

	ಪಶ್ಚಿಮ ಕರಾವಳಿಯ ನುಗ್‍ಸೌಕ್ ಮತ್ತು ಸ್ವಾರ್ಟೆನ್ ಹುಕ್ ಪರ್ಯಾಯ ದ್ವೀಪಭಾಗಗಳು ಮತ್ತು ಡಿಸ್ಕೊದ್ವೀಪದಲ್ಲಿ ಕ್ರಿಟೇಷಸ್ ಮತ್ತು ಟರ್ಷಿಯರಿ ಕಲ್ಪಗಳಿಗೆ ಸೇರಿದ ಜಲಜಶಿಲಾನಿಕ್ಷೇಪಗಳಿವೆ. ಈ ಶ್ರೇಣಿಯ ಮರಳು ಶಿಲೆ ಮತ್ತು ಜೇಡುಶಿಲಾಸ್ತರಗಳೊಡನೆ ಕಲ್ಲಿದ್ದಲಿನ ಸಿರಗಳು ಬೆರೆತಿವೆ. ಅಲ್ಲಲ್ಲೆ ಟರ್ಷಿಯರಿ ಯುಗದ ಬೆಸಾಲ್ಟ್ ಲಾವಾಸ್ತರಗಳು ಶ್ರೇಣಿಯನ್ನು ಆವರಿಸಿರುವುದನ್ನು ಕಾಣಬಹುದು.
(ಬಿ.ವಿ.ಜಿ.)

ಮೇಲ್ಮೈಲಕ್ಷಣ : ಡೆನ್ಮಾರ್ಕಿನ ಕಡಲ ತೀರದ ಉದ್ದ 7,438 ಕಿ.ಮೀ. ಜಟ್ಲಂಡ್ ಮತ್ತು ಅದರ ಬಳಿಯ ದ್ವೀಪಸ್ತೋಮ ಉತ್ತರ ಯೂರೋಪ್ ಬಯಲಿನ ಭಾಗ. ಅದರ ಅತ್ಯುನ್ನತ ಬಿಂದು (566') ಆಗ್ನೇಯ ಜಟ್ಲಂಡಿನಲ್ಲಿದೆ. ಈ ಪ್ರದೇಶದ ಅರ್ಧಭಾಗದ ಎತ್ತರ ಸಮುದ್ರ ಮಟ್ಟದಿಂದ 100' ಗೂ ಕಡಿಮೆ. ಡೆನ್ಮಾರ್ಕಿನ ಸರಾಸರಿ ಎತ್ತರ 98'. ಇಲ್ಲಿ ಎರಡು ಬಗೆಯ ಭೂಲಕ್ಷಣಗಳಿವೆ. ಜಟ್ಲಂಡಿನ ಪಶ್ಚಿಮ ತೀರದಲ್ಲಿರುವ ನಿಸಮ್ ಕಡಲ ತೋಳಿನಿಂದ ಪೂರ್ವಾಭಿಮುಖವಾಗಿ ವೀಬಾರ್ಗ್ ಕೌಂಟಿಯ ಕಡೆಗೂ ಅಲ್ಲಿಂದ ದಕ್ಷಿಣಾಭಿಮುಖವಾಗಿ ಅಬನ್ರಾಗೆ ಮತ್ತು ಜರ್ಮನಿಯಲ್ಲಿರುವ ಫ್ಲೆನ್ಸ್‍ಬರ್ಗ್ ನಗರಕ್ಕೆ ಗೆರೆಯೊಂದನ್ನೆಳೆದರೆ (ಭೂಪಟದಲ್ಲಿ ಂ—ಃ ರೇಖೆ) ಅದು ಜಟ್ಲಂಡನ್ನು ಎರಡು ಸ್ವಾಭಾವಿಕ ವಿಭಾಗಗಳನ್ನಾಗಿ ವಿಂಗಡಿಸುತ್ತದೆ. ಕೊನೆಯ ಹಿಮಾಚ್ಛಾದನೆಯ ಕಾಲದಲ್ಲಿ ಪಶ್ಚಿಮಾಭಿಮುಖವಾಗಿ ಇಲ್ಲಿಯವರೆಗೆ ಹಿವi ಹರಿದಿತ್ತು. ಈ ಎಲ್ಲೆಯ ಪಶ್ಚಿಮ ಮತ್ತು ದಕ್ಷಿಣಕ್ಕೆ ತಗ್ಗಿನ, ಮರಳು ತುಂಬಿದ ಬಂಜರು ನೆಲ ಏಕಪ್ರಕಾರವಾಗಿ ಹಬ್ಬಿದೆ. ಗಾಳಿಗೆ ಇದಿರಾಗಿ, ಬಹುಮಟ್ಟಿಗೆ ಬೋಳು ಬಯಲಾಗಿರುವ ಈ ಪ್ರದೇಶದಲ್ಲಿ ಬೇಸಾಯದ ಜಮೀನನ್ನು ರಕ್ಷಿಸಲು ಅಲ್ಲಲ್ಲಿ ಶಂಕುಧಾರಿ ವೃಕ್ಷಗಳ ತೋಪುಗಳನ್ನು ಬೆಳಸಲಾಗಿದೆ. ಪೂರ್ವದ ಕಡೆಯ ನೆಲ ಹೆಚ್ಚು ವೈವಿಧ್ಯಮಯ. ದುಂಡು ಬೆಟ್ಟಗಳೂ ಸರೋವರಗಳೂ ತೆರೆದ ಕಣಿವೆಗಳೂ ಕಿರಿದಾದ ಬಯಲುಗಳೂ ಇವೆ. ಇಲ್ಲಿ ಕಾಡುಗಳು ತಕ್ಕಮಟ್ಟಿಗೆ ಇವೆ. ಜನವಸತಿಯೂ ಹೆಚ್ಚು.

	ಡೆನ್ಮಾರ್ಕಿನಲ್ಲಿ ದೊಡ್ಡ ನದಿಗಳಿಲ್ಲ. ಸಂಚಾರಯೋಗ್ಯವಲ್ಲದ ಕೆಲವು ಚಿಕ್ಕನದಿಗಳುಂಟು. ಸರೋವರಗಳೂ ಚಿಕ್ಕವು; ಅಲ್ಲದೆ ತಟ್ಟೆಯಾಗಿವೆ. ಉತ್ತರ ಸಮುದ್ರಕ್ಕೆ ಅಭಿಮುಖವಾಗಿರುವ ತೀರದಲ್ಲಿ ಸಾಲಾಗಿ ಮರಳುದಿಬ್ಬಗಳಿವೆ. ಇವುಗಳಲ್ಲಿ ಕೆಲವು 100' ಎತ್ತರವಾಗಿರುವುದುಂಟು. ಇಲ್ಲಿ ಕಡಲು ಆಳವಾಗಿಲ್ಲ, ಮಂಜು ಮುಸುಕುವುದುಂಟು. ಇಲ್ಲಿ ಹಲವು ಹಡಗುಗಳು ಒಡೆದು ಮುಳುಗಿರುವುದರಿಂದ ಇದನ್ನು ಕಬ್ಬಿಣತೀರವೆಂದು ಕರೆಯುವುದುಂಟು. ನೈಋತ್ಯದಲ್ಲಿ ಮರಳು ದಿಬ್ಬಗಳ ನಡುವೆ ಕಡಲು ನುಗ್ಗಿ ಫ್ಯಾನರ್, ಮ್ಯಾಂಡ, ರಮ ಎಂಬ ದ್ವೀಪಗಳನ್ನು ಸೃಷ್ಟಿಸಿವೆ. ಮುಖ್ಯ ಭೂಭಾಗದ ಕರಾವಳಿಯಾದ ಫೆನ್ಲಂಡನ್ನು ಕಡಲು ನುಂಗದಂತೆ ಒಡ್ಡುಗಳನ್ನು ಕಟ್ಟಿದೆ. ಇನ್ನೂ ಉತ್ತರದಲ್ಲಿ ಅಳಿವೆಗಳಿಗೆ ಅಡ್ಡಲಾಗಿ ಮರಳು ಚಾಚಿಕೊಂಡು ಕಿರಿ ಆಳದ ಲಗೂನುಗಳು ಸಂಭವಿಸಿವೆ. ಎಸ್ಬೀಯರ್ಗ್ ಒಂದೇ ತಕ್ಕಮಟ್ಟಿಗೆ ಉತ್ತಮವಾದ ಬಂದರು. ಬಾಲ್ಟಿಕ್ ತೀರಕ್ಕೆ ಈಗಿನ ಸ್ವರೂಪ ಬಂದಿರುವುದು ಹಿಮನದಿಗಳ ಕ್ರಿಯೆಯಿಂದಾಗಿ. ಇಲ್ಲಿ ತಗ್ಗಿನ ದಡದ ಅಂಕು ಡೊಂಕಾದ ಹಿಮ ಕರಗಿ ಹರಿದ ಜಲ ಪ್ರವಾಹದಿಂದ ಕೊರೆಯಲ್ಪಟ್ಟ ಕಣಿವೆಗಳ ಬತ್ತಿದ ಕೊನೆಗಳು ಇವು. ಇವುಗಳಲ್ಲಿ ಒಂದೊಂದರ ಅಗ್ರಭಾಗದಲ್ಲೂ ಒಂದೊಂದು ಮುಖ್ಯವಾದ ಬಂದರಿದೆ. ಅಲ್ಲಲ್ಲಿ ಸುಣ್ಣಕಲ್ಲಿನ ಬಂಡೆಗಳು ಕೋರೆ ಹಲ್ಲುಗಳಂತೆ ಚಾಚಿಕೊಂಡಿವೆ.

ವಾಯುಗುಣ : ಉತ್ತರ ಸಮುದ್ರದ ಪೂರ್ವದ ಅಂಚಿನಲ್ಲಿರುವ ಡೆನ್ಮಾರ್ಕಿನದು ಆದ್ರ್ರ ವಾಯುಗುಣ. ಪಶ್ಚಿಮದ ಸಾಗರಿಕ ವಾಯುಗುಣಕ್ಕೂ ಮಧ್ಯ ಮತ್ತು ಪೂರ್ವ ಯೂರೋಪಿನ ಖಂಡಾಂತರ ವಾಯುಗುಣಕ್ಕೂ ನಡುವಣ ಹಂತವನ್ನು ಇಲ್ಲಿ ಕಾಣಬಹುದು. ಸಾಮಾನ್ಯವಾಗಿ ಇದು ಸಾಗರದ ಪ್ರಭಾವಕ್ಕೆ ಒಳಗಾಗಿರುವುದಾದರೂ ಚಳಿಗಾಲದಲ್ಲಿ ಪೂರ್ವ ಯೂರೋಪಿನ ಖಂಡಾಂತರ ವಾಯುಗುಣದ ಪ್ರಭಾವಕ್ಕೆ ಇದೂ ಒಳಗಾಗಿ, ಬಾಲ್ಟಿಕ್ ಸಮುದ್ರದ ನೀರು ಗಡ್ಡೆಕಟ್ಟಬಹುದು. ಪೂರ್ವಕ್ಕೆ ಹೋದಂತೆ ಚಳಿಗಾಲದಲ್ಲಿ ಉಷ್ಣತೆ ಹೆಚ್ಚು ತಗ್ಗುತ್ತದೆ, ಬೇಸಗೆಯಲ್ಲಿ ಹೆಚ್ಚು ಏರುತ್ತದೆ. ವಾರ್ಷಿಕ ಮಾಧ್ಯ ಉಷ್ಣತೆ 8ಲಿಅ (46ಲಿಈ). ಜನವರಿ-ಫೆಬ್ರವರಿಗಳ ಸರಾಸರಿ 0ಲಿಅ (32ಲಿಈ). ಜುಲೈ ಗರಿಷ್ಠ ಉಷ್ಣತೆಯ ತಿಂಗಳು. ಆಗಿನ ಸರಾಸರಿ ಉಷ್ಣತೆ 16ಲಿಅ(61ಲಿಈ). ಪಶ್ಚಿಮದಲ್ಲಿ ಅಕ್ಟೋಬರ್-ಏಪ್ರಿಲ್ ನಡುವೆ 75 ದಿನಗಳಲ್ಲಿ ಮಂಜು ಮುಸುಕಿರುತ್ತದೆ. ಪೂರ್ವದಲ್ಲಿ ಇಂಥ ದಿನಗಳು 110. ಪೂರ್ವದಲ್ಲಿ -25ಲಿಅ (-13ಲಿಈ) ಗೆ ಉಷ್ಣತೆ ಇಳಿದಿರುವುದೂ ಉಂಟು. ವಾರ್ಷಿಕ ಸರಾಸರಿ ಅವಪತನ 24" (610 ಮಿಮೀ.). ಇದು ವರ್ಷವೆಲ್ಲ ಹರಡಿರುತ್ತದೆ. ಬೇಸಗೆಯಲ್ಲಿ ಸಿಡಿಲು-ಗುಡುಗುಗಳೊಂದಿಗೆ ಮಳೆ ಸುರಿಯುತ್ತದೆ. ಆಗಸ್ಟ್ ಆದ್ರ್ರತಮ ತಿಂಗಳು. ವರ್ಷದಲ್ಲಿ 20-40 ದಿನಗಳಲ್ಲಿ ಹಿಮ ಬೀಳುತ್ತದೆ. ವಾತಾವರಣದ ಒತ್ತಡಕ್ಕೆ ಅನುಗುಣವಾಗಿ ಗಾಳಿಯ ದಿಕ್ಕು ಬದಲಾಗುತ್ತದೆ. ಪಶ್ಚಿಮ ತೀರದ ಗಾಳಿಯ ಬಿರುಸಿನಿಂದ ಮರಳ ದಿಬ್ಬಗಳು ನಾಡಿನೊಳಕ್ಕೆ ಸಾಗಿಬರುತ್ತಿದ್ದುವು. ಇದನ್ನು ತಡೆಗಟ್ಟಲು 19ನೆಯ ಶತಮಾನದಲ್ಲಿ ಕ್ರಮ ಕೈಗೊಳ್ಳಲಾಯಿತು.
ಸಸ್ಯ ಪ್ರಾಣಿವರ್ಗ : ನವ ಶಿಲಾಯುಗ ಕಾಲದಲ್ಲಿ ಡೆನ್ಮಾರ್ಕಿನ ಬಹುಭಾಗ ಮಿಶ್ರ ಒಕ್ ಕಾಡುಗಳಿಂದ ಆವೃತವಾಗಿತ್ತು. ಕಂಚಿನ ಯುಗದ ಕಾಲದಿಂದ ಬೀಚ್ ಮರದ ಕಾಡುಗಳು ಹೆಚ್ಚಿದುವು. ಜನರು ಇಲ್ಲಿಯ ಕಾಡುಗಳನ್ನು ಸ್ವೇಚ್ಫೆಯಾಗಿ ಕಡಿದುದರಿಂದ 1800ರ ವೇಳೆಗೆ ಇಲ್ಲಿಯ ಶೇ.40ರಷ್ಟು ನೆಲ ಕುರುಚಲಿನಿಂದ ಕೂಡಿದ ಬಂಜರಾಗಿತ್ತು. ಆದರೆ ಮರಗಳನ್ನು ಬೆಳೆಸುವ ಕಾರ್ಯ ಸತತವಾಗಿ ಮುಂದುವರಿದಿದೆ. ಶಂಕುಧಾರಿ ಮರಗಳೇ ಹೆಚ್ಚು.

	ಮಧ್ಯ ಯೂರೋಪಿನ ವನ್ಯಮೃಗಗಳು ಇಲ್ಲೂ ಸಾಮಾನ್ಯ. ಜಿಂಕೆ, ನರಿ, ಮೊಲ ಹೇರಳವಾಗಿವೆ. ಕುಂದಿಲಿಗಳು ಫ್ಯಾನರ್ ದ್ವೀಪಕ್ಕೆ ಸೀಮಿತ. ಸಿಹಿ ನೀರು ಮೀನು ಮತ್ತು ಈಲ್‍ಗಳು ಅನೇಕ ನದಿಗಳಲ್ಲೂ ಸರೋವರಗಳಲ್ಲೂ ಇವೆ. ಪಶ್ಚಿಮ ಜಟ್ಲಂಡ್ ಮತ್ತು ಬಾರ್ನ್‍ಹೋಮ್‍ನ ಸುತ್ತಮುತ್ತ ಸಾಲ್ಮನ್‍ಗಳಿವೆ. ಉತ್ತರ ಸಮುದ್ರ, ಸ್ಕ್ಯಾಗ್‍ರ್ಯಾಕ್ ಮತ್ತು ಕ್ಯಾಟಗಾಟ್‍ಗಳಲ್ಲಿ ಮೀನುಗಾರಿಕೆ ವ್ಯಾಪಕವಾಗಿ ನಡೆಯುತ್ತದೆ. ಫ್ಯಾರೋ ದ್ವೀಪಗಳ ಜನಕ್ಕೆ ಇದೊಂದು ಮುಖ್ಯ ಕಸಬು.
(ಡಿ.ಎಸ್.ಜೆ.)

ಜನತೆ : ಡೆನ್ಮಾರ್ಕಿನ ಜನ ನಾರ್ಡಿಕ್ ಜನಾಂಗಕ್ಕೆ ಸೇರಿದವರು. ಆದರೆ ಸ್ಕ್ಯಾಂಡಿನೇವಿಯದ ಉತ್ತರಭಾಗದ ಜನರಿಗಿಂತ ಇಲ್ಲಿಯವರು ಇತರ ಜನಾಂಗಗಳೊಂದಿಗೆ ಹೆಚ್ಚು ಮಿಶ್ರಗೊಂಡಿದ್ದಾರೆ. ಕೊನೆಯ ಹಿಮಯುಗದ ಅನಂತರ ದಕ್ಷಿಣದಿಂದ ಉತ್ತರಕ್ಕೆ ಬಂದ ಪ್ರಥಮ ಆಕ್ರಮಣಕಾರಿಗಳ ವಂಶದವರು ಇವರು. ಸಾಮಾನ್ಯವಾಗಿ ಇವರು ಉದ್ದವಾಗಿ ಕಟ್ಟುಮಸ್ತಾಗಿ ಇರುತ್ತಾರೆ. ಇವರದು ನಸುಹೊಂಬಣ್ಣದ ಕೂದಲು, ನೀಲಿಯ ಅಥವಾ ಕಂದುಬಣ್ಣ. ಇವರ ತಲೆಬುರುಡೆ ಮಧ್ಯಗಾತ್ರದ್ದು. ಭಾಷೆ ನಾರ್ಡಿಕ್; ಜರ್ಮಾನಿಕ್ ಗುಂಪಿನ ಉಪಶಾಖೆಯಿದು. ನಾರ್ವೀಜಿಯನ್ ಮತ್ತು ಸ್ವೀಡಿಷ್ ಭಾಷೆಗಳಿಗೂ ಇದಕ್ಕೂ ಹತ್ತಿರದ ಸಂಬಂಧ ಇರುವುದಾದರೂ ಇದು ಆ ಭಾಷೆಗಳನ್ನು ಇಂಪಲ್ಲ. ಡೆನ್ಮಾರ್ಕಿನಲ್ಲಿ ಜಟ್ಲಂಡ್ ಪರ್ಯಾಯದ್ವೀಪವಲ್ಲದೆ ಸುಮಾರು ಐನೂರು ದ್ವೀಪಗಳಿರುವುದರಿಂದ ಉಪಭಾಷೆಗಳಿವೆ. ಆದರೆ ಈಚೆಗೆ ಪ್ರಾದೇಶಿಕ ಭಿನ್ನತೆಗಳು ಕಡಿಮೆಯಾಗುತ್ತಿವೆ.

	ಡೆನ್ಮಾರ್ಕಿನ ಬಹುತೇಕ ಜನರು ಲೂತರನ್ ಚರ್ಚಿಗೆ ಸೇರಿದವರು. ಇವರನ್ನು ಬಿಟ್ಟರೆ ರೋಮನ್ ಕ್ಯಾತೊಲಿಕ್ ಚರ್ಚಿಗೆ ಸೇರಿದವರು ಪ್ರಮುಖ. ಫ್ಯಾನರ್ ಮತ್ತು ರಮ ದ್ವೀಪಗಳ ಸ್ತ್ರೀಯರು ರಾಷ್ಟ್ರೀಯ ಉಡುಗೆಗಳನ್ನು ಈಗಲೂ ತೊಡುತ್ತಾರೆ. ಡೇನಿಷ್ ಜನರಿಗೆ ಒಳ್ಳೆಯ ಹಾಸ್ಯಪ್ರಜ್ಞೆಯಿದೆ. ಡೆನ್ಮಾರ್ಕ್ ಎರಡನೆಯ ಮಹಾಯುದ್ಧ ಕಾಲದಲ್ಲಿ ಜರ್ಮನ್ ಆಕ್ರಮಣಕ್ಕೆ ಒಳಗಾಗಿದ್ದಾಗ ಶತ್ರುಗಳ ವಿರುದ್ಧ ಅಲ್ಲಿಯ ಜನರು ಪ್ರಯೋಗಿಸಿದ ಪರಿಣಾಮಕಾರಿ ಅಸ್ತ್ರವೆಂದರೆ ಚತುರೋಕ್ತಿ.
ಆರ್ಥಿಕತೆ : ಡೆನ್ಮಾರ್ಕ್ ವ್ಯವಸಾಯಕ್ಕೆ ಪ್ರಸಿದ್ಧವಾಗಿದೆ. ಅದರ ಭೂಮಿಯ ಉತ್ಪನ್ನದ ಮಟ್ಟ ಹೆಚ್ಚಿನದು. ವ್ಯವಸಾಯಕ್ಕೆ ಅನುಕೂಲಕರವಾದ ತೀರಪ್ರದೇಶ ಮತ್ತು ನೀರಾವರಿ ಯೋಜನೆಗಳಿಂದ ಅಲ್ಲಿ ಸಾಗುವಳಿಗೆ ಬಹಳಷ್ಟು ಪ್ರದೇಶ ದೊರೆತಿದೆ. ಕಚ್ಚಾ ಸಾಮಗ್ರಿಯ ಕೊರತೆ ಇದ್ದರೂ ಕೈಗಾರಿಕೀಕರಣ ಶೀಘ್ರವಾಗಿ ಬೆಳೆಯುತ್ತಿದೆ. ಕೃಷಿಗಿಂತ ಕೈಗಾರಿಕೆಯನ್ನು ಹೆಚ್ಚು ಜನ ಈಗ ಅವಲಂಬಿಸಿದ್ದಾರೆ

	ಕೃಷಿ: ದ್ವೀಪದ ವಿಸ್ತೀರ್ಣದ 70% ಭಾಗ ಸಾಗುವಳಿ ಪ್ರದೇಶ. ಡೆನ್ಮಾರ್ಕಿನಲ್ಲಿ ಶೇ. 95ರಷ್ಟು ಹಿಡುವಳಿಗಳು ಉಳುವವರ ಒಡೆತನಕ್ಕೊಳಪಟ್ಟಿವೆ. ಸರ್ಕಾರ ದೊಡ್ಡ ಹಿಡುವಳಿಗಳನ್ನು ಒಡೆದು ಕೃಷಿ ಕಾರ್ಮಿಕರಲ್ಲಿ ಹಂಚಿದ್ದೇ ಇದಕ್ಕೆ ಕಾರಣ. ಕೃಷಿಗೆ ಒಳಪಟ್ಟಿರುವ 30,00,000 ಹೆಕ್ಟೇರುಗಳಲ್ಲಿ ಶೇ. 60 ರಷ್ಟು ಜಮೀನಿನಲ್ಲಿ ಧಾನ್ಯಗಳನ್ನೂ 25%ರಲ್ಲಿ ಹುಲ್ಲು ಮತ್ತು ಹಸಿರುಮೇವನ್ನೂ 6%ರಲ್ಲಿ ವಾಣಿಜ್ಯ ಬೆಳೆಗಳನ್ನೂ 10%ರಲ್ಲಿ ಗೆಡ್ಡೆ, ಗೆಣಸು ಮುಂತಾದವನ್ನೂ ಬೆಳೆಯುತ್ತಾರೆ. ಸಹಕಾರ ಯೋಜನೆಗಳಿಂದ ಸಣ್ಣ ಹಿಡುವಳಿಗಳು ಲಾಭದಾಯಕವಾಗಿವೆ ಪಶುಪಾಲನೆ ಬಹುಮುಖ್ಯ ಉದ್ಯಮ. ಸಣ್ಣ ಗಾತ್ರದಲ್ಲಿ ಉದ್ಯಮ ನಡೆಸುವವರಿಗೆ ಅನುಕೂಲಗಳನ್ನು ಕಲ್ಪಿಸಲಾಗಿದೆ.

	1875ರಿಂದ ಕೃಷಿ ಉತ್ಪಾದನೆ ಸತತವಾಗಿ ಹೆಚ್ಚುತ್ತಿದೆ. 1880ರ ದಶಕಕ್ಕೂ 1970ರ ದಶಕಕ್ಕೂ ಹೋಲಿಸಿದರೆ ಬೆಳೆ ಮೂರು ಪಟ್ಟಿಗಿಂತ ಮಿಗಿಲಾಗಿ ಹೆಚ್ಚಿದೆ. ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳಲ್ಲಿ ಮಾತ್ರ ಇದು ಸ್ವಲ್ಪ ಇಳಿಮುಖವಾಗಿತ್ತು. ಈಗ ಸಾಗುವಳಿಯ ಪ್ರದೇಶದ ವಿಸ್ತರಣೆಯ ಜೊತೆಗೆ ಉತ್ತಮ ತಳಿ ಬೀಜದ ಬಳಕೆ, ವೈe್ಞÁನಿಕ ವ್ಯವಸಾಯ ಮತ್ತು ಯಾಂತ್ರೀಕರಣದಿಂದ ಈ ಹೆಚ್ಚಳ ಸಾಧ್ಯವಾಗಿದೆ. ಧಾನ್ಯ, ಆಲೂಗೆಡ್ಡೆ, ಮೇವಿನ ಗೆಣಸು, ಸಿಹಿ ಗೆಣಸು, ಬೀಜಗಳು ಮತ್ತು ಹಸಿರುಮೇವು ಮುಖ್ಯ ಬೆಳೆಗಳು. ಧಾನ್ಯಗಳಲ್ಲಿ ಬಾರ್ಲಿ ಮತ್ತು ಓಟ್ಸ್ ಮುಖ್ಯ. ಭೂಸುಧಾರಣೆಯಿಂದಾಗಿ ದೊಡ್ಡ ಹಿಡುವಳಿಗಳ ಸಂಖ್ಯೆ ಕಡಿಮೆಯಾಗಿದೆ. 10 ಹೆಕ್ಟೇರುಗಳಿಗೂ ಕಡಿಮೆಯ 41,000 ಸಣ್ಣ ಹಿಡುವಳಿಗಳು, 10-50 ಹೆಕ್ಟೇರುಗಳ 83,000 ಮಧ್ಯಮ ಹಿಡುವಳಿಗಳು ಮತ್ತು 60 ಹೆಕ್ಟೇರುಗಳಿಗೆ ಮೀರಿದ 9,200 ದೊಡ್ಡ ಹಿಡುವಳಿಗಳು ಇವೆ.

	ಬೆಳೆಗಳ ಉತ್ಪನ್ನದಲ್ಲಿ ವೃದ್ಧಿ, ಪೋಷಕ ಆಹಾರಗಳ ಅಮದು-ಇವುಗಳಿಂದ ಪಶುಸಂಗೋಪನೆಗೆ ಸಹಾಯವಾಗಿದೆ. ಮೊದಲನೆಯ ಮತ್ತು ಎರಡನೆಯ ಮಹಾಯುದ್ಧಗಳ ಕಾಲದಲ್ಲಿ ವ್ಯವಸಾಯದ ಅಭಿವೃದ್ಧಿಗೆ ಬಹಳ ಹಾನಿಯಾಯಿತು. ಆದರೆ ಇಂದು ಈ ಕ್ಷೇತ್ರದಲ್ಲಿ ಶೀಘ್ರ ಅಭಿವೃದ್ಧಿಯಾಗಿದೆ. ಸಾಕುಪ್ರಾಣಿಗಳ ಹೊಸಹೊಸ ತಳಿಗಳ ಸಂಶೋಧನೆ ಮತ್ತು ಅವುಗಳ ಸಾಕಣೆಯ ವಿಧಾನದಲ್ಲಿ ಸುಧಾರಣೆ ಹಾಗೂ ಯಂತ್ರಗಳ ಉಪಯೋಗದಿಂದ ಡೆನ್ಮಾರ್ಕು ಹೈನು ಉತ್ಪನ್ನದಲ್ಲಿ ಪ್ರಪಂಚದಲ್ಲೇ ಉತ್ತಮ ಸ್ಥಾನ ಗಳಿಸಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. 

	ಸಹಕಾರ ಚಳುವಳಿ: ಡೆನ್ಮಾರ್ಕಿನಲ್ಲಿ 18ನೆಯ ಶತಮಾನದಲ್ಲಿ ಸಹಕಾರ ಚಳವಳಿ ಪ್ರಾರಂಭವಾಯಿತು. 1769ರಲ್ಲಿ ಸ್ಥಾಪಿಸಿದ ಡೆನ್ಮಾರ್ಕಿನ ರಾಯಲ್ ವ್ಯವಸಾಯ ಸಂಘ ಇದಕ್ಕೆ ನಾಂದಿ ಹಾಡಿತು. ಇದರ ಜೊತೆಗೆ ಇತರ ಸಹಕಾರ ಸಂಘಗಳೂ ತಳಿಯನ್ನು ಉತ್ತಮಪಡಿಸುವಲ್ಲಿ ಹಾಗೂ ಇತರ ಅನೇಕ ಅಭಿವೃದ್ಧಿಕಾರ್ಯಗಳಲ್ಲಿ ತೊಡಗಿದುವು. ಡೇನಿಷ್ ರೈತ ಸಂಘಗಳ ಮಹಾಸಂಘ ಮತ್ತು ಡೇನಿಷ್ ಸಹಕಾರ ಸಂಘಗಳ ಮಹಾಸಂಘ ಸೇರಿ ವ್ಯವಸಾಯ ಪರಿಷತ್ತನ್ನು ಸ್ಥಾಪಿಸಿದುವು. ಈ ಪರಿಷತ್ತು ಮತ್ತು ಸಣ್ಣ ಹಿಡುವಳಿದಾರರ ಸಂಘಗಳ ರಾಷ್ಟ್ರೀಯ ಮಹಾಸಂಘಗಳು, ಸರ್ಕಾರ, ಕೈಗಾರಿಕೆ ಮತ್ತು ವಿದೇಶಿ ವ್ಯಾಪಾರಗಳಿಗೆ ಸಂಬಂಧಿಸಿದ ವ್ಯವಹಾರದಲ್ಲಿ ವ್ಯವಸಾಯರಂಗವನ್ನು ಪ್ರತಿನಿಧಿಸುತ್ತಿದ್ದುವು. 1882ರಲ್ಲಿ ಪ್ರಥಮ ಹೈನು ಸಹಕಾರ ಸಂಘವನ್ನು ಸ್ಥಾಪಿಸಲಾಯಿತು. 1960ರ ದಶಕದಲ್ಲಿ 1,200ಕ್ಕೂ ಹೆಚ್ಚು ಹೈನುಕೇಂದ್ರಗಳಿದ್ದು, ಅವುಗಳಲ್ಲಿ ಬಹುಸಂಖ್ಯೆಯವು ಸಹಕಾರ ಸಂಘಗಳವು. ಹಂದಿಮಾಂಸ ಸಿದ್ಧಪಡಿಸುವ ಸುಮಾರು 60 ಕಾರ್ಖಾನೆಗಳಿದ್ದುವು. ಮೊಟ್ಟೆ ಉತ್ಪಾದನೆಯಲ್ಲಿ ಸುಮಾರು 30%ರಷ್ಟು ಸಹಕಾರ ವ್ಯವಸ್ಥೆಯ ವ್ಯಾಪ್ತಿಯೊಳಕ್ಕೆ ಬಂದಿತ್ತು. ಇದರ ಯಶಸ್ಸಿಗೆ ಜನಪದ ಪ್ರೌಢಶಾಲೆಗಳ ಮೂಲಕ ವಯಸ್ಕರ ಶಿಕ್ಷಣ ನೀಡಿದ್ದು ಮುಖ್ಯ ಕಾರಣವಾಯಿತು. ಬೆಣ್ಣೆ, ಕೆನೆ ಮತ್ತು ಮೊಟ್ಟೆಗಳನ್ನು ಅಧಿಕ ಪರಿಮಾಣದಲ್ಲಿ ರಫ್ತು ಮಾಡುತ್ತಾರೆ.

	ಮೀನುಗಾರಿಕೆ: ಡೆನ್ಮಾರ್ಕ್ ಮೀನುಗಾರಿಕೆಗೆ ಪ್ರಸಿದ್ಧವಾಗಿದೆ. ಸುಮಾರು 0.4% ಜನ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಅಲ್ಲದೆ ಅನೇಕರು ಮೀನು ಎಣ್ಣೆ ತಯಾರಿಕೆ, ವ್ಯಾಪಾರ, ಬಲೆ ನೇಯುವುದು, ದೋಣಿ ಕಟ್ಟುವುದು, ಸಮುದ್ರ ಎಂಜಿನಿಯರಿಂಗ್, ಸಲಕರಣೆಗಳ ಸಿದ್ಧತೆ ಮೊದಲಾದ ಕೆಲಸಗಳಲ್ಲಿ ತೊಡಗಿದ್ದಾರೆ. ಬೆಸ್ತರು ಸಹಕಾರಸಂಘಗಳನ್ನು ರಚಿಸಿಕೊಂಡಿದ್ದಾರೆ. ಸರ್ಕಾರ ಇವಕ್ಕೆ ಸಹಾಯಧನ ನೀಡುತ್ತದೆ. ಹೆಚ್ಚಿನ ಮೀನುಗಾರಿಕೆ ಸಂಘಗಳು ಜಟ್ಲಂಡಿನ ಉತ್ತರದ ತುದಿಯ ಸ್ಕಾಗನ್‍ನಲ್ಲಿವೆ. 

	ಅರಣ್ಯ, ಖನಿಜ ಸಂಪತ್ತು: ಕಾಡುಗಳೂ ಪ್ಲಾಂಟೇಷನ್‍ಗಳೂ ದೇಶದ ಸುಮಾರು ಹತ್ತನೆಯ ಒಂದು ಭಾಗವನ್ನು ಆವರಿಸಿವೆ. ಈ ಪ್ರದೇಶದ ಅರ್ಧಭಾಗ ಶಂಕುಪರ್ಣಿ ಮರಗಳಿಂದಲೂ ಉಳಿದ ಭಾಗ ಬೀಚ್ ಮತ್ತು ಇತರ ಮರಗಳಿಂದಲೂ ಕೂಡಿವೆ.

	ಬಾರ್ನ್‍ಹೋಮ್‍ನಲ್ಲಿ ಕಲ್ಲಿದ್ದಲು ದೊರೆಯುತ್ತದೆ. ಕಲ್ಲಿದ್ದಲಾಗಲಿ ಇತರ ಯಾವುದೇ ಖನಿಜಗಳಾಗಲಿ ಡೆನ್ಮಾರ್ಕಿನಲ್ಲಿ ಎಲ್ಲೂ ಹೇರಳವಾಗಿ ದೊರೆಯುವುದಿಲ್ಲ. ಜಟ್ಲಂಡಿನಲ್ಲಿ ಲಿಗ್ನೈಟ್ ಮತ್ತು ಬಾಗ್ ಕಬ್ಬಿಣ ಅದುರು ಸಿಗುತ್ತದೆ. ಬಾರ್ನ್‍ಹೋಮ್‍ನಲ್ಲಿ ಗ್ರಾನೈಟ್, ಕಯೊಲಿನ್ ನಿಕ್ಷೇಪಗಳಿವೆ. ಪಶ್ಚಿಮ ಜಟ್ಲಂಡಿನಲ್ಲಿ ಲವಣ ತೆಗೆಯುತ್ತಾರೆ.

	ಕೈಗಾರಿಕೆ: ಇಲ್ಲಿ ಸಣ್ಣ ಗಾತ್ರದ ಕೈಗಾರಿಕೆಗಳು ಹೆಚ್ಚಾಗಿವೆ. 1870ರಲ್ಲಿ ಡೆನ್ಮಾರ್ಕಿನಲ್ಲಿ ಕೈಗಾರಿಕಾ ಕ್ರಾಂತಿ ಪ್ರಾರಂಭವಾಯಿತು. ನೇಯ್ಗೆ, ನೂಲ್ಗೆ, ಮದ್ಯ ತಯಾರಿಕೆ, ಬ್ರೆಡ್ಡು ತಯಾರಿಕೆ, ಬಟ್ಟೆ ಹೊಲಿಯುವುದು, ಮೊದಲಾದ ಕಾರ್ಯಗಳಿಗೆ ಯಂತ್ರಗಳನ್ನು ಅಳವಡಿಸಲಾಯಿತು. ಎರಡನೆಯ ಮಹಾಯುದ್ಧದ ತರುವಾಯ ಕೈಗಾರಿಕಾ ಕ್ಷೇತ್ರದಲ್ಲಿ ತೀವ್ರ ಬೆಳವಣಿಗೆಯಾಯಿತು. ಕಬ್ಬಿಣ ಮತ್ತು ಲೋಹವಸ್ತುಗಳೇ ಇಲ್ಲಿಯ ಕೈಗಾರಿಕಾ ಉತ್ಪಾದನೆಗಳಲ್ಲಿ ಮುಖ್ಯವಾದವು. ಅವುಗಳಲ್ಲಿ ಡೀಸೆûಲ್ ಯಂತ್ರಗಳು, ಯಂತ್ರಹಡಗುಗಳು, ಹಾಲಿನ ಮತ್ತು ವ್ಯವಸಾಯ ಯಂತ್ರಗಳು, ರೆಫ್ರಿಜಿರೇಟರುಗಳು, ಸಿಮೆಂಟ್ ಯಂತ್ರಗಳು, ವಿದ್ಯುತ್ ಉಪಕರಣಗಳು ಹಾಗೂ ಮೋಟಾರ್ ಯಂತ್ರಗಳು ಮುಖ್ಯವಾದವು. ಇವುಗಳ ಜೊತೆಗೆ ರಾಸಾಯನಿಕ, ಮರಮುಟ್ಟು, ಸಿಮೆಂಟ್, ಬೀರ್, ಪಿಂಗಾಣಿ ಸರಕು, ಪೀಠೋಪಕರಣ, ಸಕ್ಕರೆ, ಹತ್ತಿಬಟ್ಟೆ ಮೊದಲಾದವುಗಳಿಗೆ ಸಂಬಂಧಿಸಿದ ಕಾರ್ಖಾನೆಗಳಿವೆ. ದೋಣಿ ಮತ್ತು ಹಡಗು ಕಟ್ಟುವ ಕೈಗಾರಿಕೆ ಗಣ್ಯಸ್ಥಾನಪಡೆದಿದೆ. 

	ವಿದ್ಯುತ್ತಿನ ಉತ್ಪಾದನ ಕೇಂದ್ರಗಳನ್ನು ಸಹಕಾರ ಸಂಘಗಳು ಅಥವಾ ಪೌರ ಸಭೆಗಳು ನಡೆಸುತ್ತವೆ. ಕಲ್ಲಿದ್ದಲು, ಲಿಗ್ನೈಟ್ ಅಥವಾ ತೈಲದಿಂದ ವಿದ್ಯುತ್ತನ್ನು ಉತ್ಪಾದಿಸುತ್ತದೆ. ಸ್ವೀಡನ್ನಿನಿಂದಲೂ ವಿದ್ಯುತ್ತನ್ನು ಅಮದು ಮಾಡಿಕೊಳ್ಳಲಾಗುತ್ತದೆ.

	ಸಾರಿಗೆ, ಸಂಪರ್ಕ: ದೇಶದ ಮುಖ್ಯ ರಸ್ತೆಗಳ ಉದ್ದ 8,512 ಕಿ.ಮೀ. ಇದರಲ್ಲಿ 2,328 ಕಿ.ಮೀ. ಹೆದ್ದಾರಿಗಳು. ಸರ್ಕಾರ ನಡೆಸುತ್ತಿರುವ ರೈಲ್ವೆ 2,443 ಕಿ.ಮೀ. 1,576 ಕಿ.ಮೀ. ರೈಲ್ವೆ ಖಾಸಗಿ ವಲಯದಲ್ಲಿದೆ. ಅನೇಕ ಸೇತುವೆಗಳನ್ನು ಕಟ್ಟಲಾಗಿದೆ. ಫಿನ್ ದ್ವೀಪಕ್ಕೂ ಜಟ್ಲಂಡ್‍ಗೂ ನಡುವಣ ಸೇತುವೆ 875 ಗಜ, ಷಲಾನ್ ಮತ್ತು ಫಾಲ್‍ಸ್ಟರ್ ನಡುವಣ ಸೇತುವೆ 3,499 ಗಜ ಮುಖ್ಯವಾದವು. ಕೋಪೆನ್‍ಹೇಗೆನ್‍ನಿಂದ ಎಸ್‍ಬೀಯರ್ಗ್ ಹೆದ್ದಾರಿಯೂ ರೈಲ್ವೆಯೂ ಇವೆ. ಈ ಮಾರ್ಗದಲ್ಲಿ ಫ್ರೆಡರಿಷಿಯ ಒಂದು ಜಂಕ್ಷನ್.

	ಡೆನ್ಮಾರ್ಕಿನಿಂದ ಸ್ವೀಡನ್‍ಗೂ ಪೂರ್ವಜರ್ಮನಿಗೂ ದೋಣಿ ಸಾರಿಗೆ ವ್ಯವಸ್ಥೆಯುಂಟು.

	ಡೆನ್ಮಾರ್ಕಿನಲ್ಲಿ ಬಂದರುಗಳ ನಿರ್ಮಾಣಕ್ಕೆ ಅನುಕೂಲಕರ ಭೌಗೋಳಿಕ ಲಕ್ಷಣಗಳಿವೆ. ಈ ದೇಶ ಅಸಂಖ್ಯಾತ ದ್ವೀಪಗಳಿಂದಲೂ ದೀರ್ಘ ತೀರ ಪ್ರದೇಶದಿಂದಲೂ ಕೂಡಿರುವುದರಿಂದ ಇಲ್ಲಿ ಸಮುದ್ರಯಾನ ವಿಶೇಷವಾಗಿ ಬೆಳೆದಿದೆ. ಇಲ್ಲಿಯ ವ್ಯಾಪಾರ ಹಡಗು ತಂಡ ಬೃಹತ್ತಾದದ್ದು. ದೇಶೀಯ ಮತ್ತು ವಿದೇಶೀ ವ್ಯಾಪಾರದ ಬಹುಭಾಗ ಸಮುದ್ರದ ಮೂಲಕವೇ ನಡೆಯುತ್ತದೆ.	

	ಕೋಪೆನ್‍ಹೇಗೆನ್‍ನಿಂದ ಪಶ್ಚಿಮ ಯೂರೋಪಿನ ಎಲ್ಲ ಮುಖ್ಯನಗರಗಳಿಗೆ ಮತ್ತು ಆಸ್ಟ್ರೇಲಿಯವನ್ನು ಬಿಟ್ಟು ಉಳಿದ ಎಲ್ಲ ಖಂಡಗಳಿಗೆ ನಿಯತವಿಮಾನ ಸಾರಿಗೆಯುಂಟು. ಆಂತರಿಕ ವಿಮಾನಸಾರಿಗೆ ವ್ಯವಸ್ಥೆಯೂ ಇದೆ. ಕೋಪೆನ್‍ಹೇಗೆನ್‍ನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ.

	ಡೆನ್ಮಾರ್ಕಿನಲ್ಲಿ  ತಂತಿ ಕೇಂದ್ರಗಳೂ, ಟೆಲಿಫೋನುಗಳೂ ಮತ್ತು ಟೆಲಿವಿಷನ್‍ಗಳೂ ಬಳಕೆಯಲ್ಲಿವೆ. ಡೆನ್ಮಾರ್ಕಿನ ಆಕಾಶವಾಣಿ ಸರ್ಕಾರದ ಆಡಳಿತಕ್ಕೊಳಪಟ್ಟಿದೆ. 

	ಮುಖ್ಯ ಸ್ಥಳಗಳು: ಡೆನ್ಮಾರ್ಕಿನಲ್ಲಿ ದೊಡ್ಡ ಪಟ್ಟಣಗಳೆಲ್ಲ ಸಾಮಾನ್ಯವಾಗಿ ರೇವುಪಟ್ಟಣಗಳು. ಕೋಪೆನ್‍ಹೇಗೆನ್ ಡೆನ್ಮಾರ್ಕಿನ ರಾಜಧಾನಿ. ಷಲಾನ್‍ನ ಪೂರ್ವ ತೀರದಲ್ಲಿದೆ. ಇದು ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ; ಪ್ರಸಿದ್ಧ ರೇವುಪಟ್ಟಣ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಸ್ಥಳ. ಇಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣವಿದೆ. ರಾಜಧಾನಿ ಕೇಂದ್ರ ನಗರ ಜನಸಂಖ್ಯೆ 4,64,566, ಇದಕ್ಕೆ ಸೇರಿದ ಉಪನಗರಗಳನ್ನು ಒಳಗೊಂಡ ವಿಶಾಲ ಕೋಪೆನ್ ಹೇಗನ್ ನಗರದ ಜನಸಂಖ್ಯೆ 13,39,395 (2001). ಇದು ಐತಿಹಾಸಿಕ ಮಹತ್ವವುಳ್ಳ ನಗರ. ಇಲ್ಲಿ ಹಳೆಯ ಕಾಲದ ದೊಡ್ಡ ಕಟ್ಟಡಗಳಿವೆ (ನೋಡಿ- ಕೋಪೆನ್-ಹೇಗೆನ್). ಎಸ್‍ಬೀಯರ್ಗ್ (76,056) ರೇವುಪಟ್ಟಣ; ನೈಋತ್ಯ ಜಟ್ಲಂಡಿನಲ್ಲಿ ಉತ್ತರ ಸಮುದ್ರತೀರದಲ್ಲಿದೆ. ಇದು ಡೆನ್ಮಾರ್ಕಿನ ಅತಿ ದೊಡ್ಡ ಮೀನುಗಾರಿಕೆ ರೇವು. ಇಲ್ಲಿಂದ ಆಹಾರವಸ್ತುಗಳು, ಹೈನು ಉತ್ಪಾದನೆಗಳು, ಸಿಮೆಂಟು ಮುಂತಾದವು ರಫ್ತಾಗುತ್ತವೆ. ಜಟ್ಲಂಡಿನ ಪಶ್ಚಿಮ ತೀರದಲ್ಲಿ ಇದು ಶ್ರೇಷ್ಠ ರೇವು. ಆರ್ಹೂಸ್ (5,17,075)(2005) ಪೂರ್ವ ಜಟ್ಲಂಡಿನಲ್ಲಿರುವ ರೇವುಪಟ್ಟಣ. ಇಲ್ಲಿ ಬೀರ್, ಯಂತ್ರೋಪಕರಣಗಳು, ಹತ್ತಿಜವಳಿ ಮೊದಲಾದವನ್ನು ತಯಾರಿಸುತ್ತಾರೆ. ಇದೊಂದು ಸಾರಿಗೆ ಕೇಂದ್ರ. 1928ರಲ್ಲಿ ಇಲ್ಲೊಂದು ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಇದು ಡೆನ್ಮಾರ್ಕಿನ ಪ್ರಾಚೀನ ನಗರ. 948ರಲ್ಲಿ ಇದರ ಉಲ್ಲೇಖವಿದೆ. ಹಾರ್ಸನ್ (47,085) ಪೂರ್ವ ಜಟ್ಲಂಡ್ ತೀರದಲ್ಲಿದೆ. ಹತ್ತಿಬಟ್ಟೆ, ವಿದ್ಯುತ್ ಉಪಕರಣಗಳು ಮತ್ತು ಹೊಗೆಸೊಪ್ಪು ಉತ್ಪಾದನೆ ಕೇಂದ್ರ. ಆಲ್‍ಬಾರ್ಗ್ ಡೆನ್ಮಾರ್ಕಿನ ವಾಣಿಜ್ಯ ರೇವು. ಸಿಮೆಂಟ್, ಹತ್ತಿಜವಳಿ, ಹೊಗೆಸೊಪ್ಪು ಕಾರ್ಖಾನೆಗಳಿವೆ. ಹಡಗು ಕಟ್ಟುವ ಸ್ಥಳ. ಈ ಪಟ್ಟಣ 1342ರಲ್ಲಿ ಸ್ಥಾಪಿತವಾಯಿತು. 1539ರಲ್ಲಿ ಕಟ್ಟಿದ ಕೋಟೆ ಇದೆ. ಒಡನ್ಸ (1,40,886) ಫಿನ್ ದ್ವೀಪದಲ್ಲಿರುವ ನಗರ. ಡೆನ್ಮಾರ್ಕಿನ ಮೂರನೆಯ ದೊಡ್ಡ ನಗರ. ವ್ಯವಸಾಯ ಉತ್ಪಾದನೆ, ಯಂತ್ರೋಪಕರಣ, ಹತ್ತಿಜವಳಿ, ಬೀರ್, ವಿದ್ಯುತ್ ಸಲಕರಣೆ ಮುಂತಾದವು ರಫ್ತಾಗುತ್ತವೆ. ಇಲ್ಲಿ ಹಡಗು ನಿರ್ಮಾಣ ಕೇಂದ್ರವಿದೆ. 14ನೆಯ ಶತಮಾನದ ಕತೀಡ್ರಲ್ ಇದೆ. 18ನೆಯ ಶತಮಾನದ ಅರಮನೆ ಇದೆ. ಇಲ್ಲಿ 1964ರಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಕ್ರಿ.ಶ.ಸು.1000ದಲ್ಲಿ ಇದರ ಉಲ್ಲೇಖವಿದೆ. ಡೆನ್ಮಾರ್ಕಿನ ಇತರ ಪಟ್ಟಣಗಳು ಫ್ರೆಡರಿಷಿಯ, ಕಲಿಂಗ್, ರಾನರ್ಸ್, ನಾಕ್ಸ್‍ಕೌ ಮತ್ತು ರಸ್ಕಿಲ (41,928).
(ಡಿ.ಎಸ್.ಜೆ.) 

	ವಿದೇಶಿ ವ್ಯಾಪಾರ, ಹಣಕಾಸು: ಡೆನ್ಮಾರ್ಕಿನ ವಿದೇಶಿ ವಾಣಿಜ್ಯದ ಪ್ರಾಮುಖ್ಯ ಬಹಳ ಹೆಚ್ಚಿನದು. ಈ ಶತಮಾನದ ಮೊದಲನೆಯ ಮೂರು ದಶಕಗಳಲ್ಲಿ ಡೆನ್ಮಾರ್ಕಿನ ರಫ್ತಿನಲ್ಲಿ ಶೇ.60ರಷ್ಟು ಹೋಗುತ್ತಿದ್ದದ್ದು ಬ್ರಿಟನ್ನಿಗೆ. 1930ರ ವರ್ಷಗಳ ಆರ್ಥಿಕ ಮುಗ್ಗಟ್ಟಿನಿಂದಾಗಿಯೂ ಎರಡನೆಯ ಮಹಾಯುದ್ಧದ ಅನಂತರವೂ ಡೆನ್ಮಾರ್ಕಿನ ರಫ್ತಿನಲ್ಲಿ ಬ್ರಿಟನ್ನಿನ ಪ್ರಾಮುಖ್ಯ ವಿಶೇಷವಾಗಿ ತಗ್ಗಿತು. ಈಗ ಡೆನ್ಮಾರ್ಕಿನ ರಫ್ತಿನಲ್ಲಿ 25% ಮತ್ತು ಆಮದಿನಲ್ಲಿ 20% ಬ್ರಿಟನ್ನಿನ ಪಾಲು. ಇತರ ಪಾಲುದಾರ ರಾಷ್ಟ್ರಗಳು ಅಮೆರಿಕ ಮತ್ತು ಯೂರೋಪಿಯನ್ ಮಾರುಕಟ್ಟೆಯ ಇತರ ಸದಸ್ಯದೇಶಗಳು. ಡೆನ್ಮಾರ್ಕಿನ ಮುಖ್ಯ ಆಮದುಗಳು ಇಂಧನ, ಜವಳಿ, ಯಂತ್ರ, ವಾಹನ, ಲೋಹ. ಡೆನ್ಮಾರ್ಕಿನ ರಫ್ತಿನಲ್ಲಿ ಅರ್ಧ ಭಾಗ ಪ್ರಾಣಿಗಳು, ಮಾಂಸ, ಹೈನು, ಕೈಗಾರಿಕಾ ಉತ್ಪನ್ನಗಳ ರಫ್ತು ಕ್ರಮೇಣ ಹೆಚ್ಚುತ್ತಿದೆ.

	ಡೆನ್ಮಾರ್ಕಿನ ನೋಟು ನೀಡಿಕೆ ಬ್ಯಾಂಕು ದಿ ಡೆನ್ಮಾರ್ಕ್ ನ್ಯಾಷನಲ್ ಬ್ಯಾಂಕ್. ಇದರ ನಿರ್ವಹಣೆಗೆ 25 ಗವರ್ನರುಗಳ ಒಂದು ಮಂಡಲಿ ಇದೆ. ದೊಡ್ಡ ಖಾಸಗಿ ಬ್ಯಾಂಕುಗಳೂ ಸಣ್ಣ ಬ್ಯಾಂಕುಗಳೂ ಇವೆ. ಒಟ್ಟು ಅರ್ಧ ಬ್ಯಾಂಕಿಂಗ್ ವ್ಯವಹಾರ ಇರುವುದು ಮೂರು ದೊಡ್ಡ ಬ್ಯಾಂಕುಗಳಲ್ಲಿ. ಉಳಿತಾಯ ಬ್ಯಾಂಕುಗಳ ಕೋಪೆನ್‍ಹೇಗೆನ್‍ನಲ್ಲಿ ಸ್ಟಾಕು ವಿನಿಮಯ ಕೇಂದ್ರವಿದೆ. ವಿಮಾಸಂಸ್ಥೆಗಳಲ್ಲಿ ಹಲವು 1700ರಷ್ಟು ಹಳೆಯವು. ಇವು ಹೊರದೇಶಗಳಲ್ಲೂ ಹೆಚ್ಚು ವ್ಯವಹಾರ ಬೆಳೆಸಿವೆ.

	ಡೆನ್ಮಾರ್ಕಿನ ನಾಣ್ಯ ಡೇನಿಷ್ ಕ್ರೋನೆ (ಬಹುವಚನ ಕ್ರೋನೆರ್). 100 ಓರ್ = 1 ಡೇನಿಷ್ ಕ್ರೋನೆ.
ಸಂವಿಧಾನ ಮತ್ತು ಆಡಳಿತ : ಡೆನ್ಮಾರ್ಕಿನದು ಸಂವಿಧಾನಬದ್ದ ರಾಜಪ್ರಭುತ್ವ. ಅದರ ಈಗಿನ ಸಂವಿಧಾನ 1953ರಲ್ಲಿ ರಚಿಸಲ್ಪಟ್ಟಿತು. ವಿಧಾನಾಧಿಕಾರ ರಾಜ(ರಾಣಿ) ಮತ್ತು ಸಂಸತ್ತಿನಲ್ಲಿ ಸಂಯುಕ್ತವಾಗಿ ನಿಹಿತವಾಗಿದೆ. ಸಂಸತ್ತಿನಲ್ಲಿ ಏಕಸದನ (ಪೋಕೆಟಿಂಗ್) ಇದೆ. ಅದರ 179 ಸದಸ್ಯರ ಪೈಕಿ ಇಬ್ಬರು ಫ್ಯಾರೋ ದ್ವೀಪಗಳಿಂದಲೂ ಇಬ್ಬರು ಗ್ರೀನ್ಲೆಂಡಿನಿಂದಲೂ ಆಯ್ಕೆಯಾಗುತ್ತಾರೆ. ಇವರ ಅಧಿಕಾರಾವಧಿ ನಾಲ್ಕು ವರ್ಷ. 21 ವರ್ಷಗಳಿಗಿಂತ ಹೆಚ್ಚಿನ ವಯಸ್ಸಿನವರಿಗೆಲ್ಲ ಮತದಾನದ ಹಕ್ಕುಂಟು. ಸದನದ ಅಧಿವೇಶನ ವರ್ಷವಿಡೀ ನಡೆಯುತ್ತದೆ. ಸಂಸತ್ತಿನ ವಿಶ್ವಾಸ ಕಳೆದುಕೊಂಡಾಗ ಪ್ರಧಾನಿ ರಾಜೀನಾಮೆ ಕೊಡಬೇಕು, ಇಲ್ಲವೇ ಹೊಸ ಚುನಾವಣೆಗೆ ಬೇಡಿಕೆ ಸಲ್ಲಿಸಬೇಕು.

	ಆಡಳಿತಾಧಿಕಾರ ದೊರೆಯಲ್ಲಿ ವಿಹಿತವಾಗಿರುತ್ತದೆ. ಪ್ರಧಾನಿ ಮತ್ತು 18 ಮಂತ್ರಿಗಳಿಂದ ಕೂಡಿದ ಸ್ಟಾಟ್ಸ್‍ರಾಡ್ (ರಾಜ್ಯಮಂಡಲಿ) ಮೂಲಕ ದೊರೆ ಆಡಳಿತ ನಿರ್ವಹಿಸುತ್ತಾನೆ. ಸಂಸತ್ತಿನ ಒಪ್ಪಿಗೆಯಿಲ್ಲದೆ ರಾಜ್ಯದ ಪ್ರದೇಶವನ್ನು ವಿಸ್ತರಿಸುವ ಅಥವಾ ಕಡಿಮೆ ಮಾಡುವ ಅಧಿಕಾರ ದೊರೆಗೆ ಇಲ್ಲ. ಸಂಸತ್ತಿನ ಸಹಕಾರದೊಂದಿಗೆ ನೆರವೇರಿಸಬಹುದಾದ ಯಾವುದೇ ಪ್ರಧಾನ ಕರ್ತವ್ಯವನ್ನಾಗಲಿ ಅವನು ಅದರ ಸಮ್ಮತಿಯಿಲ್ಲದೆ ನೆರವೇರಿಸಲಾರ. ಹಾಗೆಯೇ ದೊರೆ ಸಂಸತ್ತಿನ ಒಪ್ಪಿಗೆಯೊಂದಿಗೆ ಮಾಡಿಕೊಂಡ ಯಾವುದೇ ಅಂತರರಾಷ್ಟ್ರೀಯ ಒಪ್ಪಂದವನ್ನು ಅದರ ಒಪ್ಪಿಗೆಯಿಲ್ಲದೆ ಅಂತ್ಯಗೊಳಿಸಲಾರ. ಡೆನ್ಮಾರ್ಕಿನ ರಕ್ಷಣಾ ಬಲದ ಮೇಲೆ ಅಥವಾ ಡೆನ್ಮಾರ್ಕಿನ ನೆಲದ ಮೇಲೆ ಆಕ್ರಮಣ ನಡೆದ ಸಂದರ್ಭ ವಿನಾ ಬೇರೆ ಸಂದರ್ಭದಲ್ಲಿ ಸಂಸತ್ತಿನ ಒಪ್ಪಿಗೆಯಿಲ್ಲದೆ ದೊರೆ ರಕ್ಷಣಾ ದಳವನ್ನು ಯಾವ ವಿದೇಶಿ ರಾಷ್ಟ್ರದ ವಿರುದ್ಧವೂ ಬಳಸಲಾರ. 

	ಒಂದು ವಿಧೇಯಕ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಅನಂತರ ಮೂರು ದಿನಗಳೊಳಗೆ ಸಂಸತ್ತಿನ ಮೂರನೆಯ ಒಂದು ಭಾಗಕ್ಕಿಂತ ಕಡಿಮೆಯಿರದ ಸಂಖ್ಯೆಯ ಸದಸ್ಯರು ಆ ವಿಧೇಯಕವನ್ನು ಪ್ರಜಾನಿರ್ಧಾರಕ್ಕೆ ಒಪ್ಪಿಸಬೇಕೆಂದು ಕೇಳಿಕೊಂಡರೆ ಆಗ ಅದನ್ನು ಪ್ರಜಾನಿರ್ಧಾರಕ್ಕೆ ಒಪ್ಪಿಸಬೇಕಾಗುತ್ತದೆ. ಒಟ್ಟು ಮತದಾರರಲ್ಲಿ ಶೇಕಡ 30ಕ್ಕೆ ಕಡಿಮೆಯಿರದ ಮತದಾರರ ಬಹುಸಂಖ್ಯೆಯ ಮತಗಳಿಂದ ತಿರಸ್ಕರಿಸಲ್ಪಟ್ಟರೆ ಅದು ನಿಷ್ಪ್ರಯೋಜಕವಾಗುತ್ತದೆ.

	ಡೆನ್ಮಾರ್ಕಿನ ಈಗಿನ ರಾಣಿ 2ನೆಯ ಮಾರ್ಗರೆಟ್. 

	ಡೆನ್ಮಾರ್ಕಿನ ನ್ಯಾಯಾಂಗ ಸರ್ಕಾರದಿಂದ ಸ್ವತಂತ್ರವಾಗಿದೆ. ನ್ಯಾಯಾಂಗ ಮಂತ್ರಿಯ ಶಿಫಾರಸ್ಸಿನ ಮೇರೆಗೆ ದೊರೆ (ರಾಣಿ) ನ್ಯಾಯಮೂರ್ತಿಗಳನ್ನು ನೇಮಿಸುತ್ತಾನೆ. 100ಕ್ಕೂ ಕೆಳ ನ್ಯಾಯಾಲಯಗಳೂ 2 ಅಪೀಲು ನ್ಯಾಯಾಲಯಗಳೂ ಕೋಪೆನ್‍ಹೇಗೆನ್‍ನಲ್ಲಿ ಪರಮೋನ್ನತ ನ್ಯಾಯಾಲಯವೂ ಇವೆ. ಕೋಪೆನ್‍ಹೇಗೆನ್‍ನಲ್ಲಿ ಕಾರ್ಮಿಕರ ಮಧ್ಯೆ ಉದ್ಭವಿಸುವ ವಿವಾದಗಳನ್ನು ತೀರ್ಮಾನಿಸಲು ಕಾರ್ಮಿಕ ನ್ಯಾಯಾಲಯವಿದೆ.

	ಪ್ರತಿಯೊಂದು ಸಾರಿಯ ಮಹಾಚುನಾವಣೆಗಳ ಅನಂತರವೂ ಸಂಸತ್ತು ಒಬ್ಬ ಓಂಬುಡ್ಸ್‍ಮನ್ ಅನ್ನು (ಲೋಕಪಾಲ) ನೇಮಿಸುತ್ತದೆ. ಈತ ಸಾರ್ವಜನಿಕ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಬರುವ ಖಾಸಗಿ ವ್ಯಕ್ತಿಗಳ ದೂರುಗಳ ತನಿಖೆ ನಡೆಸುತ್ತಾನೆ. ಅಧಿಕಾರಿಗಳು ಕಾನೂನನ್ನು ಸಾರ್ವಜನಿಕರಿಗೆ ಹೇಗೆ ಅನ್ವಯಿಸುತ್ತಾರೆ ಎನ್ನುವುದನ್ನು ಪರಿಶೀಲಿಸುವುದೂ ಈತನ ಜವಾಬ್ದಾರಿ. ಈತ ಸರ್ಕಾರದ ಉನ್ನತಾಧಿಕಾರಿಗಳ ಮತ್ತು ಆಡಳಿತದ ಲೋಪದೋಷಗಳ ಬಗ್ಗೆ ಪ್ರತಿವರ್ಷವೂ ಸರ್ಕಾರಕ್ಕೆ ವರದಿ ಒಪ್ಪಿಸುತ್ತಾನೆ.
(ಯು.ಜಿ.ಎಂ.)

	ದೇಶವನ್ನು 88 ನಗರೀಯ ಮತ್ತು 1,250 ಗ್ರಾಮೀಣ ಪೌರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದಕ್ಕೂ ನಾಲ್ಕು ವರ್ಷಗಳ ಅವಧಿಗೆ ಚುನಾಯಿತರಾದ ಪೌರಸಭೆಯಿರುತ್ತದೆ. ನಗರಗಳ ಮತ್ತು ಪಟ್ಟಣಗಳ ಮೇಲ್ವಿಚಾರಣೆಯನ್ನು ಆಂತರಿಕ ಸಚಿವಾಲಯವೂ ಗ್ರಾಮೀಣ ಪೌರಾಡಳಿತ ಪ್ರದೇಶಗಳ ಮೇಲ್ವಿಚಾರಣೆಯನ್ನು 22 ಕೌಂಟಿಗಳ (ಅಮ್ಟೆರ್) ಗವರ್ನರುಗಳೂ ನೋಡಿಕೊಳ್ಳುತ್ತಾರೆ. ಡೆನ್ಮಾರ್ಕ್ 13 ಕೌಂಟಿಗಳಾಗಿ, 271 ಪೌರಾಡಳಿತ ಪ್ರದೇಶವಾಗಿ ವಿಂಗಡಿಸಿದ್ದು, ಹೊಸ ಡೇನಿಷ್ ಪೌರಾಡಳಿತ ಸುಧಾರಣೆ 2007, ಜನವರಿ 1ರಿಂದ ಅನ್ವಯವಾಗುವಂತೆ ಕೌಂಟಿಗಳನ್ನು 5 ವಲಯಗಳನ್ನಾಗಿ ಮತ್ತು ಪೌರಾಡಳಿ ಪ್ರದೇಶಗಳನ್ನು 98ಕ್ಕೆ ಇಳಿಸಿ ಪ್ರತಿ ಪೌರಾಡಳಿತಕ್ಕೆ 20,000. ಮಂದಿ ಒಳಪಡುವಂತೆ ಏರ್ಪಡಿಸಲಾಗುವುದು.

ಪ್ರಾಗಿತಿಹಾಸ : ಕ್ರಿ.ಪೂ.10000ಕ್ಕೆ ಹಿಂದೆ ಇಲ್ಲಿ ಅಲೆಮಾರಿ ಬೇಟೆಗಾರರಿದ್ದರು. ಅನಂತರ ಶಿಲಾಯುಗ ಸಂಸ್ಕøತಿ ಬೆಳೆದು ಕ್ರಿ.ಪೂ.2000ದ ವೇಳೆಗೆ ನವಶಿಲಾಯುಗ ಸಂಸ್ಕøತಿಯಲ್ಲಿ ಪರ್ಯವಸಾನವಾಯಿತು. ಕೃಷಿನಿರತರಾಗಿ ಅಲ್ಲಿ ನೆಲೆಸಿದ್ದ ಜನರನ್ನು ಹೊರಗಿನಿಂದ ಬಂದವರು ಉಚ್ಚಾಟನೆ ಮಾಡಿದರೆಂದು ಕಾಣುತ್ತದೆ. ಆದ್ದರಿಂದ ಈ ಬೆಳವಣಿಗೆಗೆ ತಡೆ ಉಂಟಾಯಿತು. ಪ್ರತ್ಯೇಕ ಸಮಾಧಿ ಪದ್ಧತಿಯ ಜನರು ಮಧ್ಯ ಡೆನ್ಮಾರ್ಕನ್ನಾಕ್ರಮಿಸಿಕೊಂಡರು. ಕ್ರಿ.ಪೂ.ಸು.1500ರಲ್ಲಿ ಕಂಚಿನ ಯುಗ ಆರಂಭವಾಗಿ ಕ್ರಿ.ಪೂ.400ರ ವರೆಗೆ ಮುಂದುವರಿಯಿತು. ಆಳುವ ವರ್ಗದ ಸಂಸ್ಕøತಿಯೂ ಅತ್ಯಂತ ಪ್ರಾಚೀನ ಕಬ್ಬಿಣಯುಗದ ಕೃಷಿಕ ಸಂಸ್ಕøತಿಯೂ ಮುಖ್ಯವಾಗಿ ಹಳೆಯ ವಸತಿಗಳಲ್ಲಿ ಅಭಿವೃದ್ಧಿ ಹೊಂದಿದುವು. ಕ್ರಿಸ್ತಶಕೆಯ ಆರಂಭದ ವೇಳೆಗೆ ಇವು ಸಂಪೂರ್ಣವಾಗಿ ಪುನವ್ರ್ಯವಸ್ಥಿತವಾದುವು. ಬಹುಶಃ ಈ ವೇಳೆಗೆ ಪೂರ್ವದಿಂದ ಡೇನಿಷ್ ಜನಾಂಗಗಳು ಇಡೀ ನಾಡನ್ನು ಜಯಿಸಿದುವು.

ಇತಿಹಾಸ : ಗಾರ್ಮ್ ಎಂಬವನು (883?-?940) ಬಹುಶಃ ಅಖಂಡ ಡೆನ್ಮಾರ್ಕಿನ ಪ್ರಥಮ ದೊರೆ. ಇಲ್ಲಿಯ ಅರಸೊತ್ತಿಗೆ ಯೂರೋಪಿನಲ್ಲಿ ಅತ್ಯಂತ ಪ್ರಾಚೀನವಾದ್ದು. 10ನೆಯ ಶತಮಾನದಿಂದ ಡೇನರ ನಿಶ್ಚಿತ ಇತಿಹಾಸ ದೊರಕುತ್ತದೆ. ರೋಮನ್ ಇತಿಹಾಸಕಾರರಾದ ಪ್ಲಿನಿ (23-79) ಮತ್ತು ಟ್ಯಾಸಿಟಸರ (55?-117ರ ಅನಂತರ) ಬರೆವಣಿಗೆಗಳಲ್ಲಿ ಈ ದೇಶದ ಉಲ್ಲೇಖ ಇರುವುದಾದರೂ ಇವರು ಐತಿಹಾಸಿಕ ವ್ಯಕ್ತಿಗಳನ್ನು ನಿರೂಪಿಸಿಲ್ಲ. ಕ್ರಿಸ್ತಶಕದ ಮೊದಲಿನ ಶತಮಾನಗಳಲ್ಲಿ ಡೇನರ ಸಮುದ್ರ ಚಟುವಟಿಕೆಗಳು ಯೂರೋಪಿನ ಕರಾವಳಿ ಪ್ರದೇಶದಲ್ಲೆಲ್ಲ ವಿಸ್ತರಿಸಿದ್ದುವು. ಈ ಚಟುವಟಿಕೆಗಳಲ್ಲಿ ನಿರತರಾಗಿದ್ದವರು (ವೈಕಿಂಗರು) ಇತಿಹಾಸ ಪ್ರಸಿದ್ಧರಾಗಿದ್ದಾರೆ. ಗಾರ್ಮನ ಮಗ ಹ್ಯಾರಲ್ಡನ ಆಳ್ವಿಕೆಯ ಕಾಲದಲ್ಲಿ (940?-?985) ಡೆನ್ಮಾರ್ಕಿನ ಐಕ್ಯ ಸಾಧಿಸಿತು. ಕ್ರಿಶ್ಚನ್ ಮತಕ್ಕೆ ರಾಜಾಶ್ರಯ ದೊರೆತು ದೇಶದಲ್ಲೆಲ್ಲ ಅದರ ಪ್ರಚಾರವಾಯಿತು. ಡೆನ್ಮಾರ್ಕಿನ ನಾವಿಕರು ಬೇರೆಬೇರೆ ದೇಶಗಳಲ್ಲಿ ದಾಳಿ ಮಾಡಿದರು. ಹ್ಯಾರಲ್ಡನ ಮೊಮ್ಮಗ ಕನ್ಯೂಟ್ (994?-1035) ಇಂಗ್ಲೆಂಡನ್ನು ಗೆದ್ದ. 

	ಆದರೆ ಮುಂದೆ ಡೇನರ ಸಾಗರಾಂತರ ಚಟುವಟಿಕೆಗಳು ಕಡಿಮೆಯಾದುವು. ಡೆನ್ಮಾರ್ಕ್ ರಾಜ್ಯ ಹೆಚ್ಚು ಸಂಘಟಿಕವಾಯಿತು. 1104-1375ರಲ್ಲಿ ಆಳಿದ ವಾಲ್ಡೆಮಾರ್ ಅರಸರ ಕಾಲಕ್ಕೆ ಡೆನ್ಮಾರ್ಕ್ ತುಂಬ ಪ್ರಬಲದೇಶವಾಯಿತು. ಎಲ್ಬ ನದಿಯ ಉತ್ತರಕ್ಕಿರುವ ಪ್ರದೇಶವನ್ನೆಲ್ಲ ವಶಪಡಿಸಿಕೊಂಡ. ಆದರೆ ಈ ವಿಜಯ ಬಹುಕಾಲ ಬಾಳಲಿಲ್ಲ. ಅವನ ಮರಣಾನಂತರ ಡೆನ್ಮಾರ್ಕಿನಲ್ಲೇ ಅಂತಃಕಲಹಗಳಾದವು. ಊಳಿಗಮಾನ್ಯ ಪದ್ಧತಿ ಯೂರೋಪಿನಲ್ಲೆಲ್ಲ ಹಬ್ಬುತ್ತಿದ್ದ ಕಾಲ ಅದು. ಅರಸರು ಪ್ರಬಲರಾಗಿದ್ದಾಗ ಸರದಾರರು ಒಳ್ಳೆಯ ಬೆಂಬಲ ನೀಡುತ್ತಿದ್ದರು. ಆದರೆ ಅರಸ ದುರ್ಬಲನಾದರೆ ತಮ್ಮ ಪ್ರತಿಷ್ಠೆಯನ್ನು ಬೆಳೆಸಲು ಅವರು ಯತ್ನಿಸುತ್ತಿದ್ದರು. ಡೆನ್ಮಾರ್ಕಿನಲ್ಲಿ ಸರದಾರರ ಸಮಿತಿಯೊಂದು ಅರಸರಿಗೆ ಸಲಹೆ ನೀಡುತ್ತಿತ್ತು. ಅದು ಸಾಕಷ್ಟು ವರ್ಚಸ್ಸುಳ್ಳದ್ದಾಗಿತ್ತು. ವಾಲ್ಡೆಮಾರ್ ದೊರೆಗಳ ಕಾಲದಲ್ಲಿ ಶಿಕ್ಷಣದ ಪ್ರಚಾರ ಸಾಕಷ್ಟಾಯಿತು. ಧಾರ್ಮಿಕವಲ್ಲದೆ ಇತರ ಶಿಕ್ಷಣ ಪಡೆಯಲು ಪಾದ್ರಿಗಳೂ ಜನಸಾಮಾನ್ಯರೂ ಪ್ಯಾರಿಸ್ ವಿಶ್ವವಿದ್ಯಾಲಯಕ್ಕೆ ಹೋಗುತ್ತಿದ್ದರು. ಮೀನುಗಾರಿಕೆ, ಪಶುಪಾಲನೆ ಮತ್ತು ಹಣ್ಣಿನ ವ್ಯವಸಾಯ ಅಭಿವೃದ್ಧಿ ಹೊಂದಿ ದೇಶದ ಸಂಪತ್ತು ಬೆಳೆಯಿತು. ಇದರಿಂದ ಪ್ರಬಲವಾದ ಮಧ್ಯಮ ವರ್ಗದ ನಿರ್ಮಾಣವಾಯಿತು. ಡೆನ್ಮಾರ್ಕಿನ ಪ್ರಸಿದ್ಧ ಶ್ರೇಣಿಗಳು ಬೆಳೆದದ್ದು ಇದೇ ಕಾಲದಲ್ಲಿ.

	ನಾಲ್ಕನೆಯ ವಾಲ್ಡೆಮಾರ್ (1340-75) ಮಹತ್ವಾಕಾಂಕ್ಷಿಯಾಗಿದ್ದನಲ್ಲದೆ ಸರದಾರರ ಬಲವನ್ನು ಸಾಕಷ್ಟು ಕುಗ್ಗಿಸಿದ. ಹ್ಯಾನ್ಸಿಯಾಟಿಕ್ ಕೂಟಕ್ಕೆ (ವ್ಯಾಪಾರ ಕೂಟ) ಸೇರಿದ್ದ ವಿಸ್ಬಿ ಎಂಬ ಪ್ರಬಲ ವ್ಯಾಪಾರ ಕೇಂದ್ರದ ಸುಲಿಗೆ ಮಾಡಿದ. ಇದರಿಂದಾಗಿ ಆ ಕೂಟದೊಂದಿಗೆ ಅನೇಕ ವರ್ಷಗಳ ವರೆಗೆ ಯುದ್ಧ ಸಾಗಿತು.

	ವಾಲ್ಡೆಮಾರನ ಮಗಳು ಮಾರ್ಗರೆಟ್ ರಾಣಿಯ ಬೃಹತ್ ಡೆನ್ಮಾರ್ಕಿನ ಉದಯವಾಯಿತು. ಆಕೆ ನಾರ್ವೆಯ ಅರಸು ಹಾಕೊನನನ್ನು ಮದುವೆಯಾಗಿದ್ದಳು. 1380ರಲ್ಲಿ ಹಾಕೊನ್ ತೀರಿಕೊಂಡಾಗ ಮಗ ಓಲಾಫನ ಪರವಾಗಿ ಎರಡು ರಾಜ್ಯಗಳನ್ನೂ ಆಳತೊಡಗಿದಳು. 1387ರಲ್ಲಿ ಓಲಾಫ್ ಮೃತಪಟ್ಟ. ಹೀಗಾಗಿ ನಾರ್ವೇ ಡೆನ್ಮಾರ್ಕ್‍ಗಳೆರಡನ್ನೂ ಮಾರ್ಗರೆಟ್ ಆಳತೊಡಗಿದಳು. ಒಂದು ವರ್ಷದಲ್ಲೇ ಸ್ವೀಡನಿನಲ್ಲಿ ಕ್ರಾಂತಿಯಾಗಿ, ಸ್ವೀಡನಿನ ಜನರು ಅವಳನ್ನು ತಮ್ಮ ದೇಶದ ರಾಣಿಯಾಗಿ ಆರಿಸಿದರು. 1397ರಲ್ಲಿ ಆದ ಕಾಲ್ಮಾರ್ ಒಪ್ಪಂದದಿಂದ ಮೂರು ದೇಶಗಳ ಜನರೂ ತಂತಮ್ಮ ಸಾಮಾಜಿಕ ಮತ್ತು ರಾಜ್ಯವ್ಯವಸ್ಥೆಗಳನ್ನು ಕಾಯ್ದುಕೊಂಡರೂ ಆ ದೇಶಗಳು ಡೆನ್ಮಾರ್ಕಿನ ಚಕ್ರಾಧಿಪತ್ಯಕ್ಕೆ ಒಳಪಟ್ಟುವು.

	ಮುಂದಿನ ಅರಸರ ಕಾಲಕ್ಕೆ ಈ ಒಕ್ಕೂಟ ಬಾಳಲಿಲ್ಲ. ಅರಸರ ದೌರ್ಬಲ್ಯದಿಂದಾಗಿ ಒಂದೊಂದೇ ಪ್ರದೇಶಗಳು ಕೈಬಿಟ್ಟುವು. ಸ್ವೀಡನ್ ಪ್ರಬಲವಾಯಿತು. ಡೆನ್ಮಾರ್ಕಿನ ವಶದಲ್ಲಿದ್ದ ಅನೇಕ ಪ್ರದೇಶಗಳು ಕೈಬಿಟ್ಟುಹೋದವು. ಇದಕ್ಕೆಲ್ಲ ಸರದಾರರ ಹೆಚ್ಚಿನ ಪ್ರಭಾವವೇ ಕಾರಣವೆಂದು ಮನಗಂಡ ಅರಸರು ತಮ್ಮ ಅಧಿಕಾರವನ್ನು ಬಲಪಡಿಸಿದರು. 5ನೆಯ ಕ್ರಿಶ್ಚನ್ (1670-99) ದೊರೆಯ ಕಾಲದಿಂದ ಅಖಂಡ ಸ್ಕಾಂಡಿನೇವಿಯದ ಕಲ್ಪನೆ ರೂಪುಗೊಂಡಿತ್ತಲ್ಲದೆ ಸ್ವೀಡನಿನೊಂದಿಗೆ ನಡೆದ ಯುದ್ಧದಲ್ಲಿ ತನ್ನ ನೌಕಾಬಲದಿಂದ ಡೆನ್ಮಾರ್ಕ್ ಜಯಶಾಲಿಯಾಯಿತು. ಆದರೆ ಫ್ರಾನ್ಸಿನ 14ನೆಯ ಲೂಯಿ (1638-1715) ಸ್ವೀಡನಿನೊಡನೆ ಮಿತ್ರತ್ವವಿಟ್ಟುಕೊಂಡಿದ್ದರಿಂದ ಡೆನ್ಮಾರ್ಕಿನ ವಿಜಯಕ್ಕೆ ತಡೆಯಾಯಿತು.

	18ನೆಯ ಶತಮಾನದಲ್ಲಿ ಡೆನ್ಮಾರ್ಕಿನಲ್ಲಿ ಚಿಕ್ಕಪುಟ್ಟ ಉದ್ಯೋಗಗಳು ಬೆಳೆದು ಅಮೆರಿಕದ ಹೊಸ ವಸಾಹತುಗಳೊಂದಿಗೂ ಇತರ ರಾಷ್ಟ್ರಗಳೊಡನೆಯೂ ವ್ಯಾಪಾರ ಬೆಳೆಯಿತು.

	1800ರ ಬಾಲ್ಟಿಕ್ ರಾಷ್ಟ್ರಗಳ ಸಶಸ್ತ್ರ ತಾಟಸ್ಥ್ಯ ಕೂಟಕ್ಕೆ ಡೆನ್ಮಾರ್ಕ್ ಸೇರಿತು. ಯುದ್ಧಸಮಯದಲ್ಲಿ ಯುದ್ಧನೌಕೆಗಳ ನೆರವಿನಿಂದ ತಟಸ್ಥ ರಾಷ್ಟ್ರಗಳ ಹಡಗು ಸಾರಿಗೆ ಹಕ್ಕುಗಳನ್ನು ರಕ್ಷಿಸುವುದು ಇದರ ಉದ್ದೇಶ. ಇದರಿಂದ ಇಂಗ್ಲೆಂಡಿಗೂ ಡೆನ್ಮಾರ್ಕಿಗೂ ದ್ವೇಷ ಬೆಳೆಯಿತು. ಕೋಪೆನ್‍ಹೇಗೆನ್ ನಗರದ ಮೇಲೆ ಬ್ರಿಟನ್ ದಾಳಿ ಮಾಡಿತು. ಡೇನಿಷ್ ನೌಕಾಪಡೆ ಹೆಚ್ಚಿನ ಹಾನಿಗೆ ಒಳಗಾಯಿತು. ಇದರಿಂದಾಗಿ ಡೆನ್ಮಾರ್ಕ್ ಬ್ರಿಟಿಷ್ ವಿರೋಧಿ ನೆಪೋಲಿಯನನಿಗೆ ಮೊರೆಹೋಗುವಂತಾಯಿತು. ನೆಪೋಲಿಯನನ ಸೋಲಿನೊಂದಿಗೆ ಡೆನ್ಮಾರ್ಕಿಗೆ ಹೆಚ್ಚು ನಷ್ಟವಾಯಿತು. 1814ರಲ್ಲಿ ಕೀಲ್ ಒಪ್ಪಂದದಿಂದ ನಾರ್ವೇ ಕೈಬಿಟ್ಟಿತು. ಅನೇಕ ಶತಮಾನಗಳಿಂದ ಡೇನರ ಪ್ರಭುತ್ವಕ್ಕೆ ಒಳಪಟ್ಟಿದ್ದ ಪೊಮೆರೇನಿಯವೂ ಕೈಬಿಟ್ಟಿತು.

	ಕೀಲ್ ಒಪ್ಪಂದದಿಂದ ಡೆನ್ಮಾರ್ಕಿನ ಅರಸೊತ್ತಿಗೆಗೆ ಬಲವಾದ ಪೆಟ್ಟುಬಿತ್ತು. ಜನಸಾಮಾನ್ಯರು ರಾಜಕೀಯ ಹಕ್ಕುಗಳನ್ನು ಬೇಡತೊಡಗಿದರು. ಏಳನೆಯ ಫ್ರೆಡರಿಕ್ (1848-63) ಅನೇಕ ರಾಜಕೀಯ ಸುಧಾರಣೆಗಳನ್ನು ಕೈಗೊಂಡು ಪಾರ್ಲಿಮೆಂಟಿಗೆ ಹೆಚ್ಚಿನ ಅಧಿಕಾರ ನೀಡಿದ. ಪ್ರಜೆಗಳ ಸಲಹೆಯೊಂದಿಗೆ ರಾಜ್ಯ ಸಾಗಿಸುವ ಹೊಸ ಪರಂಪರೆಯನ್ನು ಫ್ರೆಡರಿಕ್ ಪ್ರಾರಂಭಿಸಿ ಡೇನರ ವಿಶೇಷವಾದ ಗೌರವ ಪ್ರೀತಿಗಳಿಗೆ ಪಾತ್ರನಾದ.

	19ನೆಯ ಶತಮಾನದಲ್ಲಿ ಜರ್ಮನಿ ಅತ್ಯಂತ ಪ್ರಬಲವಾಯಿತು. ಸ್ಲೆಷ್‍ವಿಗ್-ಹೋಲಸ್ಟೈನ್ ಪ್ರದೇಶದ ಸಲುವಾಗಿ ಎರಡೂ ರಾಷ್ಟ್ರಗಳಲ್ಲಿ ತಿಕ್ಕಾಟ ಉಂಟಾಯಿತು. 1864ರ ವಿಯೆನ್ನ ಒಪ್ಪಂದದಿಂದ ಅವೆರಡೂ ಪ್ರದೇಶಗಳಲ್ಲದೆ ಲಾನ್‍ಬರ್ಗನ್ನೂ ಜರ್ಮನ್ ಪ್ರಭುತ್ವಕ್ಕೆ ಡೆನ್ಮಾರ್ಕ್ ಬಿಟ್ಟುಕೊಡಬೇಕಾಯಿತು.

ಒಂದನೆಯ ಮಹಾಯುದ್ಧದಲ್ಲಿ (1914-18) ನಾರ್ವೇ ಸ್ವೀಡನ್‍ಗಳಂತೆ ಡೆನ್ಮಾರ್ಕೂ ತಟಸ್ಥ ರಾಷ್ಟ್ರವಾಗಿ ಉಳಿದರೂ ಜರ್ಮನಿಯ ವಿಧ್ವಂಸಕ ಜಲ ಸುರಂಗಗಳ ಚಟುವಟಿಕೆಯಿಂದಾಗಿ ಡೆನ್ಮಾರ್ಕಿನ ವ್ಯಾಪಾರ ಬಹಳವಾದ ಹಾನಿಗೆ ಒಳಗಾಯಿತು. ಇದೇ ಕಾಲಕ್ಕೆ ದೇಶದಲ್ಲಿ ರಾಜಕೀಯ, ಸಾಮಾಜಿಕ ಸುಧಾರಣೆಗಳಾಗಿದ್ದುವು. ಜನಸಾಮಾನ್ಯರಿಗೂ ಸ್ತ್ರೀಯರಿಗೂ ಮತಾಧಿಕಾರ ಬಂತು (1915).

ಎರಡನೆಯ ಮಹಾಯುದ್ಧ (1939-45) ಪ್ರಾರಂಭವಾಗುವ ಮೊದಲು ಡೆನ್ಮಾರ್ಕ್ ಜರ್ಮನಿಯೊಂದಿಗೆ ಅನಾಕ್ರಮಣ ಒಪ್ಪಂದ ಮಾಡಿಕೊಂಡಿತು. ಆದರೂ ಜರ್ಮನಿ 1940ರಲ್ಲಿ ಡೆನ್ಮಾರ್ಕನ್ನು ಆಕ್ರಮಿಸಿತು. ಡೆನ್ಮಾರ್ಕಿನ ಜನರು ನಾಟ್ಸಿ ಅತ್ಯಾಚಾರಕ್ಕೆ ವಿರೋಧವಾಗಿದ್ದರೂ ಜರ್ಮನಿಯ ಪ್ರಚಂಡ ಬಲವನ್ನು ಎದುರಿಸುವ ಸಾಮಥ್ರ್ಯ ಈ ಪುಟ್ಟ ದೇಶಕ್ಕಿರಲಿಲ್ಲ. ನಾಟ್ಸಿ ಪಕ್ಷ ತನ್ನ ಜನರನ್ನು ಸಾರ್ವಜನಿಕ ಚುನಾವಣೆಯಲ್ಲಿ ನಿಲ್ಲಿಸಿತು. ಆದರೆ ಅವರಿಗೆ ಸಂಪೂರ್ಣ ಸೋಲುಂಟಾಯಿತು. ಇದರಿಂದಾಗಿ ನಾಟ್ಸಿಗಳು ತೀವ್ರಕ್ರಮ ಕೈಗೊಂಡು ಲಷ್ಕರಿ ಕಾನೂನು ಸಾರಿದರು. ನಾಟ್ಸಿ ವಿರೋಧಿ ಮುಂದಾಳುಗಳನ್ನು ಸೆರೆ ಹಿಡಿದರು; ಅಲ್ಲದೆ ಅರಸರ ಮೇಲೂ ದಿಗ್ಬಂಧನ ಹಾಕಲಾಯಿತು. ಆದರೂ ಡೇನಿಷ್ ಜನರು ಧೈರ್ಯದಿಂದ ನಾಟ್ಸಿಗಳನ್ನು ಎದುರಿಸುತ್ತಿದ್ದರು. ಜರ್ಮನರ ನಿರ್ಬಂಧಗಳನ್ನು ದೊರೆ 8ನೆಯ ಕ್ರಿಶ್ಚನ್ ಬಹಿರಂಗವಾಗಿಯೇ ತಿರಸ್ಕರಿಸಿದ. ಎರಡನೆಯ ಮಹಾಯುದ್ಧದಲ್ಲಿ ಜರ್ಮನರ ಸೋಲಾದಮೇಲೆ (1945) ಡೆನ್ಮಾರ್ಕಿನ ವಿಮೋಚನೆಯಾಯಿತು. 1945ರಿಂದ ಡೆನ್ಮಾರ್ಕ್ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರವಾಗಿದೆ.
(ಜಿ.ಎಸ್.ಡಿ.)

ಶಿಕ್ಷಣ ಪದ್ಧತಿ : ತೀರ ಚಿಕ್ಕ ದೇಶವಾದರೂ ಡೆನ್ಮಾರ್ಕ್ ಸಹಸ್ರಾರು ವರ್ಷಗಳ ಅನುಭವ ಮತ್ತು ಚಿಂತನೆಗಳ ಫಲವಾಗಿ ಜನತೆಯ ಅವಶ್ಯಕತೆ, ಆಸಕ್ತಿ, ಸಂಸ್ಕøತಿ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ತನ್ನದೇ ಆದ ಶಿಕ್ಷಣಪದ್ಧತಿಯನ್ನು ರೂಪಿಸಿಕೊಂಡಿದೆ. ಕ್ರಿ.ಶ.9ನೆಯ ಶತಮಾನದಲ್ಲಿ ಅಲ್ಲಿಗೆ ಆಗಮಿಸಿದ ಕ್ರೈಸ್ತಪಾದ್ರಿಗಳೊಡನೆ ಅಲ್ಲಿನ ಶಿಕ್ಷಣ ಇತಿಹಾಸ ಆರಂಭವಾಗುತ್ತದೆ. ಮತಪೀಠದವರ ಕೇವಲ ಖಾಸಗಿ ಯತ್ನವಾದ ಆರಂಭವಾದ ಶಿಕ್ಷಣ ಇತ್ತೀಚಿನವರೆಗೂ ಹಾಗೆಯೇ ನಡೆದುಕೊಂಡು ಬರುತ್ತಿತ್ತು. ಅದು ಮತಪೀಠದವರಿಗೂ ಕುಟುಂಬಗಳಿಗೂ ಮಾತ್ರ ಸಂಬಂಧಿಸಿದ ಕಾರ್ಯವಾಗಿಯೇ ಉಳಿದುಕೊಂಡಿತ್ತು. 1916ರಲ್ಲಿ ದೇಶದಲ್ಲಿ ಶಿಕ್ಷಣ ಸಚಿವಾಲಯ ಆರಂಭವಾದ ಮೇಲೆ ಶಿಕ್ಷಣದ ಒಡೆತನ ಮತಪೀಠಗಳಿಂದ ರಾಷ್ಟ್ರಕ್ಕೆ ವರ್ಗವಾಯಿತು. ಶಿಕ್ಷಣ ದೊರಕಿಸಲಾರದ ಪೋಷಕರ ಮಕ್ಕಳು, ವಯಸ್ಕರಿಗಾಗಿ ಅಸ್ತಿತ್ವದಲ್ಲಿದ್ದ ಜನತಾ ಪ್ರೌಢಶಾಲೆಗಳಲ್ಲಿ ಶಿಕ್ಷಣ ಪಡೆಯುವ ಅವಕಾಶವನ್ನು ಸರ್ಕಾರ 1917ರ ರಾಜ್ಯ ಶಾಸನವೊಂದರ ಮೂಲಕ ಕಲ್ಪಿಸಿತು. ಅಂದಿನಿಂದ ಡೆನ್ಮಾರ್ಕಿನಲ್ಲಿ ಆಧುನಿಕ ಶಿಕ್ಷಣ ಪ್ರಾರಂಭವಾಯಿತೆನ್ನಬಹುದು. ಎರಡು ಮಹಾಯುದ್ಧಗಳಿಂದ ಸಮಾಜದಲ್ಲಾದ ಪರಿವರ್ತನೆಗಳ ಫಲವಾಗಿ ಶಿಕ್ಷಣ ಸರ್ಕಾರದ ಪೂರ್ಣ ಒಡೆತನಕ್ಕೆ ಬಂತು. ರಾಷ್ಟ್ರದಲ್ಲಿ ಎಲ್ಲ ಮಟ್ಟದ ಶಿಕ್ಷಣ ಸೌಲಭ್ಯಗಳನ್ನು ಒದಗಿಸುವುದು ಅದರ ಕರ್ತವ್ಯವಾಯಿತು. 1953ರಲ್ಲಿ 14 ವರ್ಷದವರೆಗಿನ ಮಕ್ಕಳಿಗೆ ಶಾಲಾ ಹಾಜರಾತಿ ಕಡ್ಡಾಯವಾಯಿತು. ಆ ವಯೋಮಾನದ ಮಕ್ಕಳಿಗೆ ಶಿಕ್ಷಣ ಸೌಲಭ್ಯವನ್ನೊದಗಿಸಲು ರಾಜ್ಯದಾದ್ಯಂತ ಪ್ರಾಥಮಿಕ ಶಾಲೆಗಳು ಅಸ್ತಿತ್ವಕ್ಕೆ ಬಂದುವು.

	ಶಿಕ್ಷಣ ವ್ಯವಸ್ಥೆ: ಪ್ರಾಥಮಿಕ ಶಿಕ್ಷಣ 7 ವರ್ಷಗಳ ಕಾಲಾವಧಿಯದು. 1960ರಿಂದೀಚೆಗೆ ಕೆಲವು ಶಾಲೆಗಳಲ್ಲಿ 8, 9, 10ನೆಯ ತರಗತಿಗಳನ್ನು ಆರಂಭಿಸಲಾಗಿದೆ. ಮೂರು ವರ್ಷದ ಪ್ರತ್ಯೇಕ ಕಿರಿಯ ಪ್ರೌಢಶಾಲೆಗಳೂ ಇವೆ. ಇಲ್ಲಿ ಅಥವಾ ಪ್ರಾಥಮಿಕ ಶಾಲೆಯಲ್ಲಿ 10ನೆಯ ತರಗತಿಯ ಶಿಕ್ಷಣ ಮುಗಿಸಿದವರು ಹಿರಿಯ ಪ್ರೌಢಶಾಲೆಗೆ (ಜಿಮ್ನೇಸಿಯಂ) ಸೇರುವರು. ಮೂರು ವರ್ಷಗಳ ಅಲ್ಲಿನ ಶಿಕ್ಷಣ ಮುಗಿಸಿದವರು ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಕುಳಿತು ಉತ್ತೀರ್ಣರಾದವರು ವಿಶ್ವವಿದ್ಯಾಲಯ ಮತ್ತು ಉನ್ನತ ತಾಂತ್ರಿಕ ಶಿಕ್ಷಣಸಂಸ್ಥೆಗಳಿಗೆ ಸೇರಬಹುದು. ರಾಜ್ಯದಲ್ಲಿ ಕೋಪೆನ್‍ಹೇಗೆನ್, ಆರೂಸ್ ಮತ್ತು ಒದನ್ಸ ವಿಶ್ವವಿದ್ಯಾಲಯಗಳಲ್ಲೂ ತಾಂತ್ರಿಕ, ವಾಣಿಜ್ಯ, ಕೃಷಿ ಮತ್ತು ಇತರ ವೃತ್ತಿಶಿಕ್ಷಣ ಸಂಸ್ಥೆಗಳಲ್ಲೂ ಉನ್ನತ ಶಿಕ್ಷಣದ ಸೌಲಭ್ಯ ಕಲ್ಪಿಸಿದೆ. ಅಧ್ಯಾಪಕರ ಶಿಕ್ಷಣಕ್ಕಾಗಿ ಸೆಮಿನರಿಗಳೂ ಇತರ ತರಬೇತು ಕಾಲೇಜುಗಳೂ ಇವೆ. ವಯಸ್ಕರ ಶಿಕ್ಷಣಕ್ಕಾಗಿ ಪೋಕ್ ಹೈಸ್ಕೂಲುಗಳೆಂಬ ಜನತಾ ಪ್ರೌಢಶಾಲೆಗಳಿವೆ. 

	ಪ್ರವೇಶ ನಿಯಮಗಳು: ಪ್ರಾಥಮಿಕ ಶಾಲೆಯ ಶಿಫಾರಸ್ಸಿನ ಮೇಲೆ ವಿದ್ಯಾರ್ಥಿಗಳನ್ನು ಕಿರಿಯ ಪ್ರೌಢಶಾಲೆಗೂ 10ನೆಯ ತರಗತಿಯ ಕೊನೆಯಲ್ಲಿ ನಡೆಯುವ ಪರೀಕ್ಷೆಯ ಆಧಾರದ ಮೇಲೆ ಜಿಮ್ನೇಸಿಯಂಗೂ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುವುದು. ಅಧ್ಯಾಪಕರ ಶಿಕ್ಷಣಕ್ಕಾಗಿ ಸೆಮಿನರಿಗಳಿಗೆ ಸೇರತಕ್ಕವರು ಕಿರಿಯ ಪ್ರೌಢಶಾಲೆಯ ಎಲ್ಲ ವಿಷಯಗಳಲ್ಲೂ ಉತ್ತೀರ್ಣರಾಗಿರಬೇಕು. ಜೊತೆಗೆ ಒಂದು ಮೌಖಿಕ ಪರೀಕ್ಷೆಯಲ್ಲೂ ಉತ್ತೀರ್ಣರಾಗಬೇಕು. ಉನ್ನತ ಶಿಕ್ಷಣಸಂಸ್ಥೆಗಳಿಗೆ ಪ್ರವೇಶ ಬಯಸುವವರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಜನತಾ ಪ್ರೌಢಶಾಲೆಗೆ ಸೇರತಕ್ಕವರಿಗೆ ಹದಿನೆಂಟು ವರ್ಷ ವಯಸ್ಸಾಗಿರಬೇಕು.

	ಪ್ರಾಥಮಿಕ ಪೂರ್ವದ ಶಿಕ್ಷಣ: ಮೂರು ವರ್ಷ ತುಂಬಿದ ಮಕ್ಕಳಿಗಾಗಿ ಕಿಂಡರ್‍ಗಾರ್ಟನ್ ಮತ್ತು ನರ್ಸರಿ ಶಾಲೆಗಳು ದೇಶಾದ್ಯಾಂತ ವ್ಯವಸ್ಥೆಗೊಂಡಿದ್ದರೂ ಅವು ಸರ್ಕಾರದ ನೇರ ಹೊಣೆಗಾರಿಕೆಗೆ ಸೇರಿಲ್ಲ. ಅವನ್ನು ಸ್ಥಳೀಯ ಸಂಸ್ಥೆಗಳೂ ಇತರ ಸಾಮಾಜಿಕ ಸಂಸ್ಥೆಗಳೂ ಆರಂಭಿಸಿ ನಡೆಸುತ್ತಿವೆ. ಅವಕ್ಕೆ ಸರ್ಕಾರದ ಧನಸಹಾಯವೇನೊ ಸಿಕ್ಕುತ್ತದೆ.

	ಪ್ರಾಥಮಿಕ ಶಿಕ್ಷಣ: ಕಡ್ಡಾಯ ಶಿಕ್ಷಣದ ಪ್ರಗತಿ ಯೂರೋಪಿನ ಇತರ ದೇಶಗಳಿಗಿಂತ ಮಂದಗತಿಯಲ್ಲಿ ಸಾಗುತ್ತಿದೆ. ಇಲ್ಲಿನ ಜನ ಬೇಸಾಯಗಾರರಾಗಿದ್ದು ಮಕ್ಕಳನ್ನು ಹೊಲಗದ್ದೆಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳುವರು. ಜೊತೆಗೆ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ತಮ್ಮ ಅಧಿಕಾರವೇ ಹೆಚ್ಚಿನದೆಂದು ಭಾವಿಸುವರು. ಅಲ್ಲದೆ ಪ್ರಾಥಮಿಕ ಶಿಕ್ಷಣ ಪಡೆಯದಿದ್ದರೂ ಮೂಲಶಿಕ್ಷಣದ ಆ ಕೊರತೆಯನ್ನು ಮುಂದೆ ವಯಸ್ಕರ ಶಿಕ್ಷಣ ಸಂಸ್ಥೆಗಳಿಗೆ ಸೇರಿ ಪರಿಣಾಮಕಾರಿಯಾಗಿ ತುಂಬಿಕೊಳ್ಳಲು ಅವಕಾಶ ಕಲ್ಪಿಸಿಕೊಳ್ಳುತ್ತಿರುವರು. ಕಡ್ಡಾಯ ಶಿಕ್ಷಣದ ವಯೋಮಿತಿಯನ್ನು 14 ರಿಂದ 15ಕ್ಕೆ ಹೆಚ್ಚಿಸಲು ಸರ್ಕಾರ ಶಾಸನಮಾಡಿದ್ದರೂ (1938) ಆ ಕಾರ್ಯ ಮೇಲಿನ ಕಾರಣಗಳಿಂದಾಗಿ ಸಫಲವಾಗಲಿಲ್ಲ. ಶಿಕ್ಷಣವೇತ್ತರೂ ಜನನಾಯಕರೂ ಆ ವಯೋಮಿತಿಯನ್ನು ಹೆಚ್ಚಿಸಬೇಕೆಂಬ ಯೋಜನೆ  ಮಾಡಿದ್ದಾರೆ.	

	7 ವರ್ಷಗಳ ಪ್ರಾಥಮಿಕ ಶಾಲೆಯಲ್ಲಿ ಡೇನಿಷ್ ಭಾಷೆ ಬರೆವಣಿಗೆ, ಗಣಿತ, ಚರಿತ್ರೆ, ಭೂಗೋಳ, ಸಂಗೀತ, ದೈಹಿಕ ಶಿಕ್ಷಣ, ನೈತಿಕ ಶಿಕ್ಷಣ, ಕಸಬು ಕಲೆಗಳು, ವಿe್ಞÁನ- ಈ ವಿಷಯಗಳನ್ನೂ 7ನೆಯ ತರಗತಿಯಲ್ಲಿ ಇಂಗ್ಲಿಷ್ ಅಥವಾ ಜರ್ಮನ್ ಭಾಷೆಯನ್ನೂ ಬೋಧಿಸುವರು.

	ಪ್ರೌಡ ಶಿಕ್ಷಣ: ಎರಡು ಹಂತಗಳಲ್ಲಿ ವ್ಯವಸ್ಥೆಗೊಂಡಿರುವ ಪ್ರೌಢಶಿಕ್ಷಣದ ಪ್ರಥಮಭಾಗವೇ ಕಿರಿಯ ಪ್ರೌಢಶಾಲೆ. ಅಲ್ಲಿ ಸಾಮಾನ್ಯವಾಗಿ ಪ್ರಾಥಮಿಕಶಾಲೆಯ ವಿಷಯಗಳನ್ನೇ ಮುಂದುವರಿಸುವರು. 8ನೆಯ ಹಾಗೂ 9ನೆಯ ತರಗತಿಗಳಲ್ಲಿ ಇಂಗ್ಲಿಷ್, ಜರ್ಮನ್, ಗೃಹಅರ್ಥಶಾಸ್ತ್ರ, ಕೃಷಿ, ಬೆರಳಚ್ಚು-ಇವು ಪ್ರಮುಖ ಐಚ್ಛಿಕವಿಷಯಗಳು. ನಾರ್ವೆ ಮತ್ತು ಸ್ವೀಡಿಷ್ ಭಾಷೆಗಳನ್ನು ಆಡಲೂ ಅರ್ಥಮಾಡಿಕೊಳ್ಳಲೂ ಕಲಿಸುವರು. ಹಿರಿಯ ಪ್ರೌಢಶಾಲೆಯಲ್ಲಿ ವಿಷಯಗಳನ್ನು ಆಳವಾಗಿ ಅಭ್ಯಾಸ ಮಾಡುವ ಅವಕಾಶವಿರುತ್ತದೆ. ಮುಖ್ಯವಾಗಿ ಅಲ್ಲಿನ ವಿದ್ಯಾರ್ಥಿಗಳು ಉನ್ನತ ಸಾಂಸ್ಕøತಿಕ ಅಥವಾ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಸಿದ್ಧತೆ ಪಡೆಯತಕ್ಕವರು. ಸಾಂಸ್ಕøತಿಕ ಶಿಕ್ಷಣಕ್ಕೆ ಹೋಗತಕ್ಕವರಿಗೆ ಗ್ರೀಕನ್ನೂ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಹೋಗತಕ್ಕವರಿಗೆ ಗಣಿತ ಮತ್ತು ವಿe್ಞÁನವನ್ನೂ ವಿಶೇಷವಾಗಿ ಬೋಧಿಸುವರು. ಶಿಕ್ಷಣಮಾಧ್ಯಮ ಡೇನಿಷ್ ಭಾಷೆ.

	ಉನ್ನತ ಶಿಕ್ಷಣ: ಕೋಪೆನ್‍ಹೇಗೆನ್, ಆರೂಸ್, ಒದನ್ಸ- ಈ ಮೂರು ವಿಶ್ವವಿದ್ಯಾಲಯಗಳೂ ವಿಶ್ವವಿದ್ಯಾಲಯದ ಅಂತಸ್ತಿನ ವೃತ್ತಿ ಮತ್ತು ತಾಂತ್ರಿಕ ಸಂಸ್ಥೆಗಳೂ ಉನ್ನತ ಶಿಕ್ಷಣಕ್ಕೆ ಮೀಸಲಾಗಿವೆ. ವಿಶ್ವವಿದ್ಯಾಲಯಗಳ ಆಡಳಿತ ಶಿಕ್ಷಣ ಸಚಿವರಿಗೆ ಸೇರಿದ್ದರೂ ಪ್ರತಿವಿಶ್ವವಿದ್ಯಾಲಯವೂ ಸಂಪೂರ್ಣ ಸ್ವಯಮಾಧಿಕಾರ ಸಂಸ್ಥೆಯಾಗಿ ಕೆಲಸಮಾಡುತ್ತದೆ. ಧರ್ಮಶಾಸ್ತ್ರ, ನ್ಯಾಯ, ರಾಜ್ಯಶಾಸ್ತ್ರ, ವೈದ್ಯಶಾಸ್ತ್ರ, ತತ್ತ್ವಶಾಸ್ತ್ರ, ಗಣಿತ ಮುಂತಾದ ಪ್ರಮುಖವಿದ್ವನ್ಮಂಡಲಿಗಳಿವೆ. ಬ್ಯಾಚಲರ್, ಮಾಸ್ಟರ್ ಮತ್ತು ಡಾಕ್ಟರ್ ಪದವಿ ತರಗತಿಗಳ ವ್ಯವಸ್ಥೆಯಿದೆ. ಪಶುವೈದ್ಯ, ಕೃಷಿ, ಅರ್ಥಶಾಸ್ತ್ರ, ವ್ಯವಹಾರ ವಿದ್ಯೆ, ದಂತ ವೈದ್ಯ, ಔಷಧಿ ನಿರ್ಮಾಣ ಶಾಸ್ತ್ರ, ಸಂಗೀತ, ಶಿಕ್ಷಣ, ಎಂಜಿನಿಯರಿಂಗ್ ಮುಂತಾದ ವಿಷಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಿಕ್ಷಣಸಂಸ್ಥೆಗಳಿವೆ.

	ಪ್ರತಿ ವಿಶ್ವವಿದ್ಯಾಲಯದಲ್ಲೂ ಕೊನಿಸ್ಟೋರಿಯಂ ಎಂಬ ಪರಮೋನ್ನತ ಸಂಸ್ಥೆ ಆಡಳಿತ ನಡೆಸುತ್ತದೆ. ಅದರಲ್ಲಿ ವಿಶ್ವವಿದ್ಯಾಲಯದ ರೆಕ್ಟರರೂ ಪ್ರೊಕ್ಟರರೂ ವಿದ್ವನ್ಮಂಡಲಿಗಳ ಹಾಗೂ ಜೀವನ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳೂ ಇರುತ್ತಾರೆ. ದಿನನಿತ್ಯದ ಕಾರ್ಯನಿರ್ವಹಣೆಗಾಗಿ ಒಂದು ಕಾರ್ಯನಿರ್ವಹಣ ಮಂಡಲಿಯೂ ಐದು ವಿದ್ವನ್ಮಂಡಲಿಗಳೂ ಇವೆ. ಜೊತೆಗೆ ವಿದ್ಯಾವಿಷಯಗಳ ಬಗ್ಗೆ ತೀರ್ಮಾನಗಳನ್ನು ಕೈಕೊಳ್ಳುವ ವಿದ್ಯಾಪರಿಷತ್ತೂ ಇದೆ. ಅದರಲ್ಲಿ ಮುಖ್ಯವಾಗಿ ಪ್ರಾಧ್ಯಾಪಕರು ಸದಸ್ಯರಾಗಿರುವರು. ಪ್ರತಿ ವಿಶ್ವವಿದ್ಯಾಲಯದಲ್ಲೂ ವಿದ್ಯಾರ್ಥಿಗಳ ಪ್ರತಿನಿಧಿಗಳನ್ನೊಳಗೊಂಡ ಒಂದೊಂದು ವಿದ್ಯಾರ್ಥಿ ಪರಿಷತ್ತೂ ಇದೆ. ಅದು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸುತ್ತದೆ. ವಿಶ್ವವಿದ್ಯಾಲಯ ವಿದ್ಯಾರ್ಥಿ ವೇತನ, ಸಾಲ, ಶಿಷ್ಯವೃತ್ತಿ ಮುಂತಾದ ರೂಪದಲ್ಲಿ ಧನಸಹಾಯ ನೀಡುತ್ತದೆ. ಯೂರೋಪಿನ ಇತರ ವಿಶ್ವವಿದ್ಯಾಲಯಗಳಂತೆ ಡೆನ್ಮಾರ್ಕಿನಲ್ಲೂ ತರಗತಿಯ ಹಾಜರಾತಿ ಐಚ್ಫಿಕ.

	ಅಧ್ಯಾಪಕರ ನೇಮಕಕ್ಕಾಗಿ ಅಗತ್ಯವೆನಿಸಿದಾಗ ಪರಿಣತರ ಸಮಿತಿಗಳನ್ನು ನೇಮಿಸುವುದುಂಟು. ಅಭ್ಯರ್ಥಿಗಳ ಆಯ್ಕೆಯಲ್ಲಿ ವಿದ್ಯಾರ್ಹತೆ, ಪಾಂಡಿತ್ಯ, ಬೋಧನ ಸಾಮಥ್ರ್ಯ, ಸಂಶೋಧನೆ ಮುಂತಾದ ಅಂಶಗಳನ್ನು ಪರಿಶೀಲಿಸುವುದುಂಟು.

	ಅಧ್ಯಾಪಕರ ಶಿಕ್ಷಣ: ಸೆಮಿನರಿ ಅಥವಾ ಅಧ್ಯಾಪಕರ ತರಬೇತುಸಂಸ್ಥೆಗಳಲ್ಲಿ ನಾಲ್ಕು ವರ್ಷಗಳ ಪ್ರಶಿಕ್ಷಣ ಪಡೆದವರು ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಬಹುದು ಹಾಗೂ ಕಿರಿಯ ಪ್ರೌಢಶಾಲೆಯ ತರಗತಿಗಳಲ್ಲೂ ಯುಜನಕೇಂದ್ರ ಮತ್ತು ಸಂಜೆಯ ತರಗತಿಗಳಲ್ಲೂ ಬೋಧಿಸಬಹುದು. ಸೆಮಿನರಿಗಳಲ್ಲಿ ಪ್ರಶಿಕ್ಷಣಕ್ಕೆ ಸೇರತಕ್ಕವರು ಕಿರಿಯ ಪ್ರೌಢಶಾಲೆಯ ಮುಖ್ಯವಿಷಯಗಳಲ್ಲಿ ತೇರ್ಗಡೆಯಾಗಿರಬೇಕು. ಜೊತೆಗೆ ಡೇನಿಷ್ ಭಾಷೆಯಲ್ಲಿ ಮಾತನಾಡುವುದರಲ್ಲೂ ಬರೆವಣಿಗೆಯಲ್ಲೂ ಪರೀಕ್ಷೆಗೆ ಕುಳಿತು ಉತ್ತೀರ್ಣರಾಗಿರಬೇಕು. ಅಲ್ಲಿ ಪ್ರಶಿಕ್ಷಣದ ಡಿಪ್ಲೊಮ ಪಡೆದವರು ಅಧ್ಯಾಪಕರಾಗಲು ಅರ್ಹತೆಪಡೆಯುತ್ತಾರೆ. ಮುಂದೆ ಅವರು ಕೋಪೆನ್‍ಹೇಗೆನ್ ಅಧ್ಯಾಪಕರ ಕಾಲೇಜಿಗೆ ಸೇರಿ ಅಲ್ಲಿನ ತರಗತಿಗಳಿಗೆ ಬೋಧಿಸುವುದಕ್ಕೂ ಅರ್ಹತೆ ಪಡೆಯಬಹುದು.

	ಹಿರಿಯ ಪ್ರೌಢಶಾಲೆ ಅಥವಾ ಜಿಮ್ನೇಸಿಯಂನಲ್ಲಿ ಅಧ್ಯಾಪಕರಾಗಲೆಳಸುವವರಿಗೆ ವಿಶ್ವವಿದ್ಯಾಲಯದ ಕಲೆ ಮತ್ತು ಶಿಕ್ಷಣ ವಿಭಾಗಗಳಲ್ಲಿ ಶಿಕ್ಷಣ ಏರ್ಪಡಿಸಿದೆ. ಅಲ್ಲಿನ ಐದು ವರ್ಷಗಳ ಯಶಸ್ವೀ ಶಿಕ್ಷಣದ ಅನಂತರ ಕ್ಯಾಂಡಿಡೇಟಸ್ ಮೆಜಿಸ್ಟೆರೈ ಅಥವಾ ಕ್ಯಾಂಡಿಡೇಟಸ್ ಸೈಂಟಿಯಾರಂ ಎಂಬ ಪದವಿ ಪಡೆಯುವರು. ಅನಂತರ ಬೇಕಾದವರು ವಿಶ್ವವಿದ್ಯಾಲಯದ ಯಾವುದಾದರೂ ವಿಷಯ ವಿಭಾಗದಲ್ಲಿ ವ್ಯಾಸಂಗ ಮಾಡಿ ಎಂ.ಎ ಅಥವಾ ಎಂ.ಎಸ್. ಪದವಿಯನ್ನು ಪಡೆಯಬಹುದು. ವೃತ್ತಿಶಿಕ್ಷಣ ಮುಗಿಸಿದ ಅಭ್ಯರ್ಥಿಗಳು ಅಧ್ಯಾಪಕರಾಗಿ ನೇಮಕವಾಗುವ ಮುನ್ನ ನಾಲ್ಕು ತಿಂಗಳಕಾಲ ಪರೀಕ್ಷಾರ್ಥ ಅಧ್ಯಾಪಕರಾಗಿ ಕೆಲಸಮಾಡಬೇಕೆಂಬ ನಿಯಮವುಂಟು. ಜಿಮ್ನೇಸಿಯಂ ಅಧ್ಯಾಪಕರು ಪ್ರಾಥಮಿಕ ಮತ್ತು ಕಿರಿಯ ಪ್ರೌಢಶಾಲೆಗಳ ಅಧ್ಯಾಪಕರಿಗಿಂತ ಸಂಬಳ ಸಾರಿಗೆಗಳಲ್ಲೂ ಸ್ಥಾನಮಾನಗಳಲ್ಲೂ ಮೇಲ್ದರ್ಜೆಯವರಾಗಿದ್ದು ವಿದ್ಯಾರ್ಹತೆಯಲ್ಲೂ ಹೆಚ್ಚಿನ ಪದವಿ ಪಡೆದಿರುತ್ತಾರೆ. ಜಿಮ್ನೇಸಿಯಂನ ಮುಖ್ಯೋಪಾಧ್ಯಾಯರಿಗೆ ರೆಕ್ಟರ್ ಎಂಬ ಹೆಸರುಂಟು. ಇದು ಯೂರೋಪಿನ ಕೆಲವು ವಿಶ್ವವಿದ್ಯಾಲಯಗಳ ಅಧ್ಯಕ್ಷರಿಗೆ ಬಳಸುವ ಹೆಸರು.

	ಔದ್ಯೋಗಿಕ ಶಿಕ್ಷಣ: ವ್ಯವಸಾಯ, ವ್ಯಾಪಾರ ಮತ್ತು ಪ್ರವಾಸೋದ್ಯಮ ಡೆನ್ಮಾರ್ಕಿನ ಮುಖ್ಯ ಉದ್ಯೋಗಗಳು. ಅಲ್ಲಿ ಕೆಲಸ ಮಾಡತಕ್ಕವರಲ್ಲಿ ಬಹುಪಾಲು ಅಶಿಕ್ಷಿತ ಕೆಲಸಗಾರರು. ರಾಷ್ಟ್ರದ ಉದ್ಯೋಗಗಳಿಗೆ ಶಿಕ್ಷಿತ ಹಾಗೂ ಕುಶಲ ಕಾರ್ಮಿಕರನ್ನೊದಗಿಸುವ ಉದ್ದೇಶದಿಂದ ಸರ್ಕಾರ 1960ರಲ್ಲಿ ಶಾಸನವೊಂದರ ಮೂಲಕ ಔದ್ಯೋಗಿಕ ಶಿಕ್ಷಣಕ್ಕೆ ಸೌಲಭ್ಯವನ್ನು ವಿಸ್ತರಿಸಿತು. ಕಡ್ಡಾಯಶಿಕ್ಷಣದ ವಯೋಮಿತಿಯನ್ನು (14) ಮುಟ್ಟಿದವರಿಗೆ ಮಾತ್ರ ಔದ್ಯೋಗಿಕ ಶಾಲೆಗೆ ಸೇರಲು ಅವಕಾಶವುಂಟು. ಉಮೇದುವಾರಿ ಅಭ್ಯರ್ಥಿಗಳೂ ಯಾವುದಾದರೂ ತಾಂತ್ರಿಕ ಅಥವಾ ವಾಣಿಜ್ಯ ಶಾಲೆಯೊಂದಕ್ಕೆ ಸೇರಿರಬೇಕು. ಕಚೇರಿ, ಕಾರ್ಯಾಲಯ, ಅಂಗಡಿ, ಕಾರ್ಖಾನೆ ಮುಂತಾದವು ಕಾನೂನುರೀತ್ಯ ಉಮೇದುವಾರಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು. ವಾಣಿಜ್ಯಶಾಲೆಗಳಲ್ಲಿ ಲೆಕ್ಕಬರಹ (ಬುಕ್‍ಕೀಪಿಂಗ್), ಬೆರಳಚ್ಚು, ಶೀಘ್ರಲಿಪಿ, ಪತ್ರವ್ಯವಹಾರ, ಆಧುನಿಕ ವ್ಯಾವಹಾರಿಕಭಾಷೆ ಇವನ್ನು ಬೋಧಿಸುವವರು. ತಾಂತ್ರಿಕಶಾಲೆಗಳಲ್ಲಿ ಇರತಕ್ಕ ಸುಮಾರು 150 ವಿವಿಧ ಕಸುಬುಕಲೆಗಳಲ್ಲಿ ಯಾವುದನ್ನಾದರೂ ಆರಿಸಿಕೊಂಡು ಶಿಕ್ಷಣ ಪಡೆಯಬಹುದು.

	ವಯಸ್ಕರ ಶಿಕ್ಷಣ: ಡೆನ್ಮಾರ್ಕಿನಲ್ಲಿ ವಯಸ್ಕರ ಶಿಕ್ಷಣಕ್ಕಾಗಿ ಏರ್ಪಟ್ಟಿರುವ ಪೋಕ್ ಹೈಸ್ಕೂಲುಗಳೆಂಬ ಜನತಾ ಪ್ರೌಢಶಾಲೆಗಳು ಅಲ್ಲಿನ ಶಿಕ್ಷಣ ಪದ್ಧತಿಯ ಒಂದು ವೈಶಿಷ್ಟ್ಯ. ನಿಕೋಲೈ ಎಫ್. ಎಸ್. ಗ್ರುಂಟ್ವಿಗ್ (1782-1872) ಎಂಬ ಪಾದ್ರಿ ಈ ಸಂಸ್ಥೆಗಳ ರೂಪರೇಷೆಗಳನ್ನು ಮೊಟ್ಟಮೊದಲು ರೂಪಿಸಿದ. ಕೇಂಬ್ರಿಜ್ ವಿಶ್ವವಿದ್ಯಾಲಯದ ವಸತಿ ಶಿಕ್ಷಣ ವ್ಯವಸ್ಥೆಯನ್ನು ನೋಡಿ ಪ್ರಭಾವಿತನಾಗಿ ಡೆನ್ಮಾರ್ಕಿನ ವಯಸ್ಕರಿಗೆ ಡೇನಿಷ್ ಭಾಷೆ ಸಂಸ್ಕøತಿ ಸಂಪ್ರದಾಯಗಳಲ್ಲಿ ಔಪಚಾರಿಕವಾಗಿ ಶಿಕ್ಷಣವೀಯಲು 1844ರಲ್ಲಿ ರಾಡಿಂಗ್ ಎಂಬಲ್ಲಿ ಮೊಟ್ಟಮೊದಲ ಜನತಾಪ್ರೌಢಶಾಲೆಯನ್ನು ಆರಂಭಿಸಿದ. ಅನಂತರ ಅವನ ಶಿಷ್ಯ ಕೋಲ್ಡ್ ಕ್ರಿಶ್ಚನ್ (ನೋಡಿ- ಕೋಲ್ಡ್,-ಕ್ರಿಶ್ಚನ್) ಎಂಬಾತ ರಿಸ್ಲಿಂಗ್‍ನಲ್ಲಿ ಮತ್ತೊಂದು ಶಾಲೆಯನ್ನು ಆರಂಭಿಸಿದ. ವಯಸ್ಕರು ಐಚ್ಛಿಕವಾಗಿ ಸೇರಿ ಶಿಕ್ಷಣ ಪಡೆಯುವ ಈ ಖಾಸಗಿ ವಸತಿ ವಿದ್ಯಾಲಯಗಳು ಸರ್ಕಾರದ ಧನಸಹಾಯದ ಬೆಂಬಲದಿಂದ ನಡೆಯುತ್ತವೆ. ಅಲ್ಲಿ ಡೇನಿಷ್ ಭಾಷೆ, ಇತಿಹಾಸ, ಸಾಹಿತ್ಯ, ಸಂಸ್ಕøತಿ, ಪೌರನೀತಿ, ಮನೋವಿe್ಞÁನ, ಗಣಿತ ಮುಂತಾದ ಜೀವನೋಪಯುಕ್ತ ವಿಷಯಗಳನ್ನು ಕಲಿಸುವರು. ಕಸಬು ಕಲೆಗಳಲ್ಲಿ ಶಿಕ್ಷಣವೀಯುವ ಅವಕಾಶವಿದ್ದರೂ ಅಲ್ಲಿನ ಶಿಕ್ಷಣದಲ್ಲಿ ವೃತ್ತಿಗಿಂತ ಸಾಂಸ್ಕøತಿಕ ಶಿಕ್ಷಣಕ್ಕೇ ಹೆಚ್ಚಿನ ಪ್ರಾಧಾನ್ಯ. ಡೇನಿಷ್ ಸಚಿವಾಲಯದ ಮೇಲ್ವಿಚಾರಣೆಗೊಳಪಟ್ಟಿರುವ ಈ ಸಂಸ್ಥೆಗಳೂ ಈಗ ದೇಶದಾದ್ಯಂತ ಏರ್ಪಟ್ಟು ಜನಪ್ರಿಯವೆನಿಸಿವೆ. ವರ್ಷಂಪ್ರತಿ ಸುಮಾರು 8,000 ವಯಸ್ಕವಿದ್ಯಾರ್ಥಿಗಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

	ಡೆನ್ಮಾರ್ಕಿನಲ್ಲಿ ಯಶಸ್ವಿಯಾಗಿ ಪ್ರಚಾರಕ್ಕೆ ಬಂದ ಜನತಾಪ್ರೌಢಶಾಲೆಗಳನ್ನು ಇತರ ದೇಶಗಳೂ ಅನುಕರಿಸಿದುವು. ಕಳೆದ ಶತಮಾನದ ಕೊನೆಯ ವೇಳೆಗೆ ಆ ಮಾದರಿಯ ಸಂಸ್ಥೆಗಳು ನಾರ್ವೆ, ಸ್ವೀಡನ್, ಫಿನ್ಲೆಂಡ್ ಮತ್ತು ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಅಸ್ತಿತ್ವಕ್ಕೆ ಬಂದುವು. ಈ ಶತಮಾನದಲ್ಲಿ ಜರ್ಮನಿ, ಇಂಗ್ಲೆಂಡ್, ಭಾರತ ಮುಂತಾದ ದೇಶಗಳಲ್ಲೂ ಪ್ರಚಾರಕ್ಕೆ ಬಂದುವು. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸರ್ ರಿಚರ್ಡ್ ಲಿವಿಂಗ್‍ಸ್ಟನ್ 1944ರಲ್ಲಿ ಜನತಾಪ್ರೌಢಶಾಲೆಗಳ ಬಗ್ಗೆ ಮಾತನಾಡುತ್ತ ಅವು ಜನತೆಯ ಶಿಕ್ಷಣಕ್ಕೆ ಬಹುಪರಿಣಾಮಕಾರಿ ವಿಶಿಷ್ಟ ರೀತಿಯ ಶಿಕ್ಷಣಸಂಸ್ಥೆಗಳೆಂದು ಮುಕ್ತಕಂಠದಿಂದ ಪ್ರಶಂಸಿಸಿದ್ದಾನೆ. ಈ ಶತಮಾನದ ಪೂರ್ವಾರ್ಧದಲ್ಲಿ ಅವು ಡೆನ್ಮಾರ್ಕಿನಲ್ಲಿ ರಾಷ್ಟ್ರೀಯ ತೇಜಸ್ಸನ್ನೂ ಓಜಸ್ಸನ್ನೂ ಪೋಷಿಸಿ ಜನತೆಯಲ್ಲಿ ಜೀವನೋತ್ಸಾಹವನ್ನು ತುಂಬಲು ನೆರವಾದುವು. ಅವುಗಳ ಕೀರ್ತಿ ಈಗ ಜಗತ್ತಿನ ಎಲ್ಲ ದೇಶಗಳಲ್ಲೂ ಹರಡಿವೆ. ಆಧುನಿಕ ಶಿಕ್ಷಣಕ್ಕೆ ಅವು ಡೆನ್ಮಾರ್ಕ್ ನೀಡಿರುವ ವಿಶಿಷ್ಟ ಕಾಣಿಕೆಯೆಂದು ಪರಿಗಣಿತವಾಗಿವೆ. 

	1921ರಲ್ಲಿ ಹೆಲ್ಸಿಂಗರಿನಲ್ಲಿ ಆರಂಭವಾಗಿರುವ ಅಂತರರಾಷ್ಟ್ರೀಯ ಜನತಾಕಾಲೇಜು ಜಗತ್ತಿನ ವಿವಿಧ ಜನಾಂಗಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ; ಅಂತರರಾಷ್ಟ್ರೀಯ ತಿಳಿವಳಿಕೆಯನ್ನೂ ಬಾಂಧವ್ಯವನ್ನೂ ಹೆಚ್ಚಿಸಲು ನೆರವಾಗುತ್ತಿದೆ.

	ಜನತಾಪ್ರೌಢಶಾಲೆಗಳಂತೆ ಕೋಪೆನ್‍ಹೇಗೆನ್ ಮತ್ತು ಆರೂಸ್ ವಿಶ್ವವಿದ್ಯಾಲಯಗಳ ವಿದ್ಯಾವಿಸ್ತರಣ ವಿಭಾಗಗಳೂ ಪರಿಣಾಮಕಾರಿಯಾಗಿ ಜನತೆಯಲ್ಲಿ ಶಿಕ್ಷಣವನ್ನು ಪ್ರಸಾರಮಾಡುತ್ತಿವೆ. ವಯಸ್ಕರಿಗೆ ವಿe್ಞÁನ, ಮಾನವಿಕಶಾಸ್ತ್ರ, ಸಮಾಜಶಾಸ್ತ್ರ ಮುಂತಾದ ವಿಷಯಗಳನ್ನು ಕುರಿತು ಉಪನ್ಯಾಸಮಾಲೆಗಳನ್ನೂ ನಿಯತಕಾಲಾವಧಿಯ ತರಗತಿಗಳನ್ನೂ ಏರ್ಪಡಿಸುತ್ತಿವೆ. ದೇಶದ ವಿವಿಧ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿರುವ ಗ್ರಂಥಾಲಯ, ವಸ್ತುಸಂಗ್ರಹಾಲಯ, ನಾಟಕಮಂದಿರ ಮತ್ತು ಇತರ ಸಾಮಾಜಿಕ ಸಂಸ್ಥೆಗಳೂ ಅಲ್ಲಿನ ವಯಸ್ಕ ಸಮಾಜದ ಶಿಕ್ಷಣಕಾರ್ಯದಲ್ಲಿ ಭಾಗವಹಿಸುತ್ತಿವೆ.

	ವಿಶಿಷ್ಟ ಶಿಕ್ಷಣ: ಸಾಮಾನ್ಯ ಮಕ್ಕಳಂತೆ ಅಪಸಾಮಾನ್ಯ ಮಕ್ಕಳಿಗೂ ಡೆನ್ಮಾರ್ಕಿನಲ್ಲಿ ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತರಲಾಗಿದೆ. ಕಿವುಡರು, ಅರೆಕಿವುಡರು, ಕುರುಡರು, ಅರೆಕುರುಡರು, ಅಂಗವಿಕಲರು, ಮಂದಬುದ್ಧಿಯವರು ಇವರೆಲ್ಲರಿಗೂ ಅವರವರಿಗೊಪ್ಪುವ ರೀತಿಯಲ್ಲಿ ಶಿಕ್ಷಣವೀಯಲು ಸರ್ಕಾರ ವಿಶಿಷ್ಟ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದೆ. ಸ್ಥಳೀಯ ಪ್ರಾಧಿಕಾರಗಳ ಆಡಳಿತಕ್ಕೊಳಪಟ್ಟಿರುವ ಈ ಸಂಸ್ಥೆಗಳು ಅಂಥ ಮಕ್ಕಳ ಶಿಕ್ಷಣ ರಕ್ಷಣಾದಿಗಳನ್ನು ನೋಡಿಕೊಳ್ಳುವುದರ ಜೊತೆಗೆ ಅವರಿಗೆ ಉದ್ಯೋಗಾವಕಾಶವನ್ನೂ ದೊರಕಿಸಲು ಯತ್ನಿಸುವುವು. ಆ ಸಂಸ್ಥೆಗಳಲ್ಲಿ ವಿಶಿಷ್ಟರೀತಿಯ ತರಪೇತು ಪಡೆದ ಅಧ್ಯಾಪಕರು ಕೆಲಸಮಾಡುವರು.

	ಶಿಕ್ಷಣ ಆಡಳಿತ: ಡೆನ್ಮಾರ್ಕಿನಲ್ಲಿ ಶಿಕ್ಷಣ ಕೇಂದ್ರಶಿಕ್ಷಣ ಸಚಿವಾಲಯಕ್ಕೆ ಸೇರಿದೆ. ಆದರೆ ಕೆಲವು ಶಿಕ್ಷಣ ಪ್ರಕಾರಗಳನ್ನು ಇತರ ಸಚಿವಾಲಯಗಳೂ ನೋಡಿಕೊಳ್ಳುತ್ತಿವೆ. ಪ್ರಾಥಮಿಕ ಪೂರ್ವದ ಶಿಕ್ಷಣವನ್ನು ಸಮಾಜಕಲ್ಯಾಣಶಾಖೆಯೂ ವಾಣಿಜ್ಯ ಶಾಲೆಗಳನ್ನು ವಾಣಿಜ್ಯ ಸಚಿವಾಲಯವೂ ನೋಡಿಕೊಳ್ಳುವುವು. ರಾಜ್ಯದ ಶಿಕ್ಷಣ ಶಾಸನಗಳನ್ನು ಶಿಕ್ಷಣಸಚಿವಾಲಯ ರೂಪಿಸಿ ಪಾರ್ಲಿಮೆಂಟಿನ ಮುಂದಿಟ್ಟು ಅನುಮತಿ ಪಡೆದುಕೊಳ್ಳುವುದು. 

	ಶಾಲೆಗಳನ್ನು ಕೇಂದ್ರ ಸಚಿವಾಲಯ ಪರೀಕ್ಷಿಸಿ ಸಲಹೆ ನೀಡಬಹುದಾದರೂ ಅವುಗಳ ಆಡಳಿತ ನಗರಸಭೆಗೂ ಗ್ರಾಮಸಭೆಗಳಿಗೂ ಸೇರಿದೆ. ಅವು ಅದಕ್ಕಾಗಿ ಪ್ರತ್ಯೇಕ ಸಮಿತಿಗಳನ್ನು ನೇಮಿಸಿ ಅವಕ್ಕೆ ಶಿಕ್ಷಣದ ಸಾಮಾನ್ಯ ಆಡಳಿತಾಧಿಕಾರವನ್ನು ವಹಿಸಿಕೊಡುತ್ತವೆ. ತಾವು ಪಠ್ಯಕ್ರಮ, ಪಠ್ಯಪುಸ್ತಕ, ಪರೀಕ್ಷೆ- ಇವುಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತವೆ. ಶಾಲೆಯ ಕಾರ್ಯಕ್ರಮಗಳನ್ನು ಪರಿಣಾಮಗೊಳಿಸಲು ನೆರವಾಗುವ ಸಲಹೆ ಸಹಕಾರಗಳನ್ನು ನೀಡಲು ಅಧ್ಯಾಪಕರ ಮತ್ತು ಪೋಷಕರ ಮಂಡಲಿಗಳೂ ಇವೆ. 

	ಶಾಲೆಗಳ ಮುಖ್ಯೋಪಾಧ್ಯಾಯರು ತಮ್ಮ ತಮ್ಮ ಶಾಲೆಗಳ ಆಡಳಿತ ನಿರ್ವಹಣೆಯ ಜೊತೆಗೆ ಪಾಠವನ್ನೂ ಬೋಧಿಸುತ್ತಾರೆ. ಇತರ ಅಧ್ಯಾಪಕರ ಕಾರ್ಯಗಳನ್ನು ಪರಿಶೀಲಿಸಿ ಮಾರ್ಗದರ್ಶನ ನೀಡುತ್ತಾರೆ. ಸೆಮಿನರಿಗಳು ವೃತ್ತಿನಿರತ ಅಧ್ಯಾಪಕರಿಗೆ ಮುನ್ನಡೆಯ ಪ್ರಶಿಕ್ಷಣವನ್ನು ಏರ್ಪಡಿಸುತ್ತವೆ. 

	ಆಧುನಿಕ ಪ್ರವೃತ್ತಿಗಳು ಮತ್ತು ಸಮಸ್ಯೆಗಳು: ಡೆನ್ಮಾರ್ಕಿನ ಜನತೆ ಜೀವನೋಪಾಯಕ್ಕೆ ವ್ಯಾಪಾರ ಮತ್ತು ಪ್ರವಾಸೋದ್ಯಮಗಳನ್ನು ಅನುಸರಿಸುವರು. ಆದ್ದರಿಂದ ಅವರಿಗೆ ಮಾತೃಭಾಷೆಯಂತೆ ಹಲವು ವಿದೇಶೀ ಭಾಷೆಗಳ ಪರಿe್ಞÁನವೂ ಅಗತ್ಯ. ಅದಕ್ಕಾಗಿ ಅಲ್ಲಿನ ಶಿಕ್ಷಣಪದ್ಧತಿಯಲ್ಲಿ ಭಾಷಾಬೋಧನೆಗೆ ಪ್ರಾಧಾನ್ಯವಿದೆ. ಜಿಮ್ನೇಸಿಯಂ ಶಿಕ್ಷಣ ಮುಗಿಸುವ ವೇಳೆಗೆ ವಿದ್ಯಾರ್ಥಿಗಳು ಏಳು ವರ್ಷಗಳ ಕಾಲ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯವನ್ನೂ ಆರು ವರ್ಷಕಾಲ ಜರ್ಮನ್ ಭಾಷೆಯನ್ನೂ ನಾಲ್ಕು ವರ್ಷಗಳ ಕಾಲ ಲ್ಯಾಟಿನ್ ಭಾಷೆಯನ್ನೂ ಮೂರು ವರ್ಷಗಳ ಕಾಲ ಫ್ರೆಂಚ್ ಭಾಷೆಯನ್ನೂ ವ್ಯಾಸಂಗಮಾಡಿರುತ್ತಾರೆ. ಎಂದರೆ ಭಾಷಾ ಶಿಕ್ಷಣಕ್ಕೆ ಇಡೀ ಯೂರೋಪಿನಲ್ಲೆ ಡೆನ್ಮಾರ್ಕ್ ಪರಿಣಾಮಕಾರಿ ವ್ಯವಸ್ಥೆ ಮಾಡಿದೆ.

	ಡೆನ್ಮಾರ್ಕಿನ ವಿಶ್ವವಿದ್ಯಾಲಯಗಲೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳೂ ವಿe್ಞÁನ ಕ್ಷೇತ್ರದಲ್ಲಿ ಗಣನೀಯ ಸಂಶೋಧನೆ ನಡೆಸಿವೆ. ಅಂತರರಾಷ್ಟ್ರೀಯ ಪ್ರಶಸ್ತಿಗಳು ಇಲ್ಲಿನ ಅನೇಕ ಸಂಶೋಧಕರಿಗೆ ಲಭಿಸಿವೆ.

	ಡೇನಿಷ್ ಶಿಕ್ಷಣ ಅಚ್ಚುಕಟ್ಟಾಗಿ ವ್ಯವಸ್ಥೆಗೊಂಡಿದ್ದರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳಲ್ಲಿ ಅಧ್ಯಾಪಕರ ಕೊರತೆ ಪ್ರಧಾನಸಮಸ್ಯೆಯಾಗಿ ಕಾಣಿಸಿಕೊಂಡಿದೆ. ಸದ್ಯದಲ್ಲಿ ಅಲ್ಲಿ 2,000 ಅಧ್ಯಾಪಕರ ಕೊರತೆಯನ್ನು ಸರಿದೂಗಿಸಬೇಕಾಗಿದೆ. ಅದಷ್ಟು ಮಂದಿ ಈ ವೃತ್ತಿಯನ್ನನುಸರಿಸುವಂತೆ ಮಾಡಲು ಸರ್ಕಾರ ವಿವಿಧ ರೀತಿಯ ಆಕರ್ಷಣೆಗಳನ್ನು ತೋರಿಸುತ್ತಿದೆ. ಕಟ್ಟಡಗಳ ಅಭಾವ ಇನ್ನೊಂದು ಸಮಸ್ಯೆ. ದಿನದಿನಕ್ಕೂ ತೀವ್ರವೇಗದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಫಲವಾಗಿ ಇರತಕ್ಕ ಕಟ್ಟಡಗಳ ಸೌಲಭ್ಯ ಬಹುಬೇಗ ಸಾಲದಾಗುತ್ತಿದೆ. ಪ್ರತಿವರ್ಷವೂ ಅದಕ್ಕಾಗಿ ಬೇಕಾದಹಾಗೆ ಹಣ ವಿನಿಯೋಗಿಸಿದರೂ ಸಮಸ್ಯೆ ಉಳಿದುಕೊಂಡೇ ಬರುತ್ತಿದೆ. ಕಡ್ಡಾಯ ಶಿಕ್ಷಣದ ಅವಧಿಯನ್ನು 14 ರಿಂದ 18ಕ್ಕೆ ಏರಿಸುವ ಪ್ರಯತ್ನದಲ್ಲಿ ಸರ್ಕಾರ ಜನಸಾಮಾನ್ಯರ ವಿರೋಧವನ್ನು ಎದುರಿಸಬೇಕಾಗಿದೆ. ಈಗ ಹಲವಾರು ಸಚಿವಾಲಯಗಳ ಆಡಳಿತಕ್ಕೆ ಹಂಚಿಹೋಗಿರುವ ತಾಂತ್ರಿಕ ಶಿಕ್ಷಣದ ವ್ಯವಸ್ಥೆಯಲ್ಲಿ ಸಮನ್ವಯವನ್ನು ಸಾಧಿಸಿದ ಏಕರೂಪದ ಆಡಳಿತವನ್ನೂ ಪ್ರವೇಶನಿಯಮವನ್ನೂ ಆಚರಣೆಗೆ ತರಬೇಕಾಗಿದೆ. ಕಡ್ಡಾಯ ಶಿಕ್ಷಣ ಪ್ರಗತಿಸಾಧಿಸಿದಂತೆ ಪ್ರೌಢ ಮತ್ತು ಉನ್ನತ ಶಿಕ್ಷಣಕ್ಕೆ ಬರತಕ್ಕವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಪ್ರೌಢಶಿಕ್ಷಣದಂತೆ ತಾಂತ್ರಿಕ ಮತ್ತು ಉನ್ನತ ಶಿಕ್ಷಣಗಳ ಸೌಲಭ್ಯವನ್ನು ವಿಸ್ತರಿಸಬೇಕಾಗಿದೆ. ರಾಷ್ಟ್ರ ಇವೆಲ್ಲ ಸಮಸ್ಯೆಗಳನ್ನು ಪರಿಹರಿಸಲು ಶಕ್ತಿಮೀರಿ ಶ್ರಮಿಸುತ್ತಿದೆ.
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ